ಕಾಸರಗೋಡು | ರಸ್ತೆಯಲ್ಲೇ ಉರುಳಿಬಿದ್ದ ಖಾಸಗಿ ಬಸ್: ಎಂಟು ಪ್ರಯಾಣಿಕರಿಗೆ ಗಾಯ
ಕಾಸರಗೋಡು, ಎ.22: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಉರುಳಿಬಿದ್ದ ಘಟನೆ ಇಂದು ಬೆಳಗ್ಗೆ ನಗರ ಹೊರವಲಯದ ವಿದ್ಯಾನಗರದಲ್ಲಿ ನಡೆದಿದ್ದು, ಎಂಟು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಕಣ್ಣೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೃತಿಕಾ ಎಂಬ ಹೆಸರಿನ ಈ ಖಾಸಗಿ ಬಸ್ ಮುಂದಿನಿಂದ ಸಾಗುತ್ತಿದ್ದ ಇನ್ನೊಂದು ಬಸ್ಸನ್ನು ಓವರ್ ಟೆಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಮಗುಚಿ ಬಿದ್ದಿದೆ.
ಬಸ್ ಪ್ರಯಾಣಿಕರಾದ ನೀಲೇಶ್ವರದ ರೇಶ್ಮಾ , ಪವಿತ್ರಾ, ಕಲ್ಯೊಟ್ ನ ಕಮಲಾಕ್ಷ, ಪ್ರಭಾಕರನ್, ಪೆರಿಯದ ಗೋಕುಲ್ ರಾಜ್ , ಸರಿನಾ, ಮೇಘಾ ಮತ್ತು ಕೃಷ್ಣ ಎಂಬವರು ಗಾಯಗೊಂಡಿದ್ದು, ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ವೇಳೆ ಬಸ್ಸಿನಲ್ಲಿ ಬೆರಳಣಿಕೆಯಷ್ಟು ಪ್ರಯಾಣಿಕರು ಮಾತ್ರ ಇದ್ದುದ್ದರಿಂದ ಸಂಭಾವ್ಯ ಭಾರೀ ಅಪಾಯ ತಪ್ಪಿದೆ. ಅಗ್ನಿಶಾಮಕ ದಳದ ಸಿಬ್ಬಂದಿ, ನಾಗರಿಕರು ಬಸ್ಸಿನಲ್ಲಿ ಸಿಲುಕಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ತಲಪಿಸಿದರು
ಅಪಘಾತದ ಹಿನ್ನೆಲೆಯಲ್ಲಿ ಕೆಲ ಸಮಯ ಈ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ಥ ಗೊಂಡಿತ್ತು.
ಬಸ್ ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಖಾಸಗಿ ಬಸ್ಸುಗಳ ಅತೀವೇಗಕ್ಕೆ ಕಡಿವಾಣ ಹಾಕೇಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಅಪಘಾತದ ಬಗ್ಗೆ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.