ಮಂಜೇಶ್ವರ: ಅ. 02 ರಂದು "ಸ್ನೇಹಾಲಯ ವ್ಯಸನ ಮುಕ್ತ ಕೇಂದ್ರ" ಲೋಕಾರ್ಪಣೆ

Update: 2024-09-28 07:41 GMT

ಮಂಜೆಶ್ವರ: ಸ್ನೇಹಾಲಯ ಚಾರಿಟೆಬಲ್ ಟ್ರಸ್ಟ್ ನ ಆಶ್ರಯದಲ್ಲಿ  "ಸ್ನೇಹಾಲಯ ವ್ಯಸನ ಮುಕ್ತ ಕೇಂದ್ರ" ಅ. 02 ರಂದು  ಲೋಕಾರ್ಪಣೆಗೊಳ್ಳಲಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಸ್ನೇಹಾಲಯದ ಮ್ಯಾನೇಜಿಂಗ್ ಟ್ರಸ್ಟಿ ಜೋಸೆಫ್ ಕ್ರಾಸ್ತಾ ಅವರು, ಅನಿವಾಸಿ ಉದ್ಯಮಿ ಮೈಕಲ್ ಡಿ ಸೋಜ ಅವರು ಸ್ನೇಹಾಲಯ ವ್ಯಸನ ಮುಕ್ತ ಕೇಂದ್ರವನ್ನು ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ  ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ. ಡೊ. ಪೀಟರ್ ಪಾವ್ಲ್ ಸಲ್ದಾನ್ಹಾ ಇವರು ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಮುಖ್ಯ ಅತಿಥಿಗಳಾಗಿ ದೆಹಲಿ ಧರ್ಮಪ್ರಾಂತ್ಯದ ಸಹಾಯಕ ಧರ್ಮಾಧ್ಯಕ್ಷ ವಂ. ದೀಪಕ್ ವಲೇರಿಯನ್ ತಾವ್ರೊ, ಪತ್ರಕರ್ತೆ ವಿಜಯಲಕ್ಶ್ಮೀ ಶಿಬರೂರು, ವಿದ್ವಾಂಸ ಆತ್ಮದಾಸ್ ಯಾಮಿ, ಕರ್ನಾಟಕ ಸ್ಪೀಕರ್ ಯು. ಟಿ ಖಾದರ್, ಮಂಜೇಶ್ವರ ಶಾಸಕ ಎ.ಕೆ.ಎಮ್. ಅಶ್ರಫ್, ಉದುಮ ಶಾಸಕ ಕುಂಞಂಬು, ದಾಯ್ಜಿವಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಅವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

2009 ಆಗಸ್ಟ್ 26 ರಂದು ಮದರ್ ತೆರೇಸಾ ಅವರ 99ನೇ ಜನ್ಮ ದಿನದಂದು ಸ್ನೇಹಾಲಯ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಇಬ್ಬರು ನಿರ್ಗತಿಕರಿಗೆ ವಸತಿ ಕಲ್ಪಿಸಿಕೊಡುವ ಮೂಲಕ ಆರಂಭವಾದ ಪಯಣ, 1600 ನಿರಾಶ್ರಿತರನ್ನು ಬೀದಿಗಳಿಂದ ರಕ್ಷಿಸಿ, 1300ಕ್ಕೂ ಅಧಿಕ ನಿವಾಸಿಗಳನ್ನು ಅವರವರ ಮನೆಗಳಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದೆ. ಇದೀಗ 300 ನಿವಾಸಿಗಳ ತಾಣವಾಗಿರುವ ಪ್ರಸ್ತುತ ಸಂಸ್ಥೆ ಹಾಗೂ ಸಂಸ್ಥಾಪಕರ ಬಗ್ಗೆ ಪ್ರಕಾಶಿಸಿದ ಸ್ನೇಹಗಂಗೆ ಪುಸ್ತಕವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಬಿಸಿಎ ವಿದ್ಯಾರ್ಥಿಗಳ ಪದವಿ ವ್ಯಾಸಂಗಕ್ಕೆ ಆರಿಸಲಾಗಿದೆ. ಕಳೆದ 15 ವರ್ಷಗಳಿಂದ, ಮಂಜೆಶ್ವರದ ಪಾವೂರು ಬಳಿಯ ಬಾಚಳಿಕೆ ಎಂಬಲ್ಲಿ ಕಾರ್ಯಾಚರಿಸುತ್ತಿರುವ ಸ್ನೇಹಾಲಯ ಚಾರಿಟೇಬಲ್ ಸಂಸ್ಥೆಯು ಸರಕಾರದ ಮಾನ್ಯತೆ ಪಡೆದು, ಸಾರ್ವಜನಿಕರ ಪ್ರಶಂಸೆ, ಬೆಂಬಲದೊಂದಿಗೆ ಮನೆಮಾತಾಗಿದೆ ಎಂದು ಜೋಸೆಫ್ ಕ್ರಾಸ್ತಾ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News