ಕಾಸರಗೋಡು ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 25 ಲಕ್ಷ ನೆರವು: ಸಿ ಎಂ ಸಿದ್ದರಾಮಯ್ಯ, ಸಲಹೆಗಾರ ಪ್ರಭಾಕರ್ ಅವರಿಗೆ ಅಭಿನಂದನೆ ಸಲ್ಲಿಕೆ

Update: 2025-03-16 12:33 IST
ಕಾಸರಗೋಡು ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 25 ಲಕ್ಷ ನೆರವು: ಸಿ ಎಂ ಸಿದ್ದರಾಮಯ್ಯ, ಸಲಹೆಗಾರ ಪ್ರಭಾಕರ್ ಅವರಿಗೆ ಅಭಿನಂದನೆ ಸಲ್ಲಿಕೆ
  • whatsapp icon

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಹೊರನಾಡಿನ ಘಟಕವಾಗಿರುವ ಕಾಸರಗೋಡು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ನಿಧಿಗೆ ಕರ್ನಾಟಕ ಸರ್ಕಾರದಿಂದ 25 ಲಕ್ಷ ರೂ ಮಂಜೂರು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇದಕ್ಕೆ ಸತತ ಪರಿಶ್ರಮ ವಹಿಸಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಅಭಿನಂದನೆ ಸಲ್ಲಿಸಿದೆ.

ಕೇರಳ ರಾಜ್ಯದ ಕಾಸರಗೋಡು ಭಾಗದಲ್ಲಿ ಕನ್ನಡ ಪತ್ರಿಕೆಗಳು ಈಗಲೂ ಹೆಚ್ಚಿನ ಪ್ರಸಾರ ಹೊಂದಿದ್ದು, ಕನ್ನಡ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವರ ಹಿತ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಪತ್ರಕರ್ತರ ಸಂಘಕ್ಕೆ ಆರ್ಥಿಕ ನೆರವು ನೀಡಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ಕಾಸರಗೋಡು ಘಟಕ ಮಾಡಿದ ಮನವಿಯನ್ನು ಪರಿಗಣಿಸಿರುವ ಮುಖ್ಯಮಂತ್ರಿಗಳು 25 ಲಕ್ಷ ರೂ ಮಂಜೂರು ಮಾಡಿದ್ದಾರೆ.

ಗಡಿ ನಾಡಿನ ಕನ್ನಡ ಪತ್ರಕರ್ತರ ಹಿತ ರಕ್ಷಣೆಗೆ ಬದ್ದವಾಗಿರುವ ಕರ್ನಾಟಕ ಸರ್ಕಾರ, ಕ್ಷೇಮಾಭಿವೃದ್ಧಿ ನಿಧಿಗೆ 25 ಲಕ್ಷ ನೀಡಿರುವುದಕ್ಕೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಕಾಸರಗೋಡು ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅವರು ಅಭಿನಂದಿಸಿದ್ದಾರೆ.

ಸರ್ಕಾರ ನೀಡಿರುವ ಅನುದಾನ ಸಂಕಷ್ಟದಲ್ಲಿರುವ ಪತ್ರಕರ್ತ ಸಮುದಾಯದ ಯೋಗಕ್ಷೇಮಕ್ಕೆ ಮತ್ತು ಯುವ ಪತ್ರಕರ್ತರ ತರಬೇತಿ ಸೇರಿದಂತೆ ಅತ್ಯುತ್ತಮ ಕಾರ್ಯಗಳಿಗೆ ಬಳಕೆಯಾಗಲಿದೆ ಎಂದು ಶಿವಾನಂದ ತಗಡೂರು ಅವರು ತಿಳಿಸಿದ್ದು, ಅನುದಾನ ಕೊಡಿಸಲು ಸಹಕರಿಸಿದ ಕೆ.ವಿ.ಪ್ರಭಾಕರ್ ಅವರ ಆಶಯಗಳಂತೆ ಕಾರ್ಯ ನಿರ್ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News