ಕಾಸರಗೋಡು| ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ: ಸಚಿವ ಪಿ.ಎ ಮುಹಮ್ಮದ್ ರಿಯಾಝ್ ಭೇಟಿ

ಕಾಸರಗೋಡು: ತಲಪ್ಪಾಡಿಯಿಂದ ಚೆಂಗಳ ತನಕ ದ 39 ಕಿ. ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯ ಮೊದಲ ಹಂತದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಲೋಕೋಪಯೋಗಿ ಸಚಿವ ಪಿ.ಎ ಮುಹಮ್ಮದ್ ರಿಯಾಝ್ ಮಂಗಳವಾರ ಸಂಜೆ ಭೇಟಿ ನೀಡಿ ಅವಲೋಕನ ನಡೆಸಿದರು.
ಮೊದಲ ಹಂತದಲ್ಲಿ 27 ಮೀಟರ್ ಉದ್ದದ ದಕ್ಷಿಣ ಭಾರತದಲ್ಲೇ ಪ್ರಥಮ ಬಾಕ್ಸ್ ಗರ್ಡರ್ ಮಾದರಿಯಲ್ಲಿ ನಿರ್ಮಿಸಿರುವ ಮೇಲ್ಸೇತುವೆ ಮೂಲಕ ಸಂಚರಿಸಿ ಪರಿಶೀಲನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಸರಗೋಡಿನ ಅಭಿವೃದ್ದಿಗೆ ಮೈಲುಗಲ್ಲು ಆಗಲಿದೆ ಎಂದು ಸಚಿವರು ಹೇಳಿದರು.
ಎರಡು ಮೇಲ್ಸೇತುವೆ, ನಾಲ್ಕು ಉದ್ದದ ಸೇತುವೆ, ನಾಲ್ಕು ಕಿರು ಸೇತುವೆಗಳು, 21 ಅಂಡರ್ ಪಾಸ್, 10 ಕಾಲ್ದಾರಿ ಓವರ್ ಬ್ರಿಡ್ಜ್, ಎರಡು ಓವರ್ ಪಾಸ್ ಗಳ ಕಾಮಗಾರಿ ಪೂರ್ಣಗೊಂಡಿದೆ. ಕಾಸರಗೋಡು ನಗರ ಮೂಲಕ 1.2 ಕಿ ಮೀ ಉದ್ದದ ಮೇಲ್ಸೇತುವೆ ಪ್ರಮುಖವಾಗಿದೆ.
ಇದಲ್ಲದೇ 210 ಮೀಟರ್ ಉದ್ದದ ಮೇಲ್ಸೇತುವೆ ಉಪ್ಪಳ ದಲ್ಲಿ ನಿರ್ಮಿಸಲಾಗಿದೆ. ಮೊಗ್ರಾಲ್ , ಕುಂಬಳೆ, ಶಿರಿಯ, ಉಪ್ಪಳ ನದಿಗಳಿಗೆ ಸೇತುವೆ ನಿರ್ಮಿಸಲಾಗಿದೆ. 2016 ರಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಗೆ ಹಸಿರು ನಿಶಾನೆ ಲಭಿಸಿತ್ತು.
ಸಚಿವರ ಜೊತೆ ಶಾಸಕರಾದ ಎಂ. ರಾಜಗೋಪಾಲನ್, ಸಿ. ಎಚ್. ಕುಂಞಿಂಬು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ದ ಉಪ ಪ್ರಬಂಧಕ ಜಸ್ಪ್ರೀತ್ , ಎಸ್.ಕೆ. ಸಿನ್ಹಾ, ಯು ಎಲ್. ಸಿ. ಸಿ ನಿರ್ದೇಶಕ ರಾದ ಪಿ. ಪ್ರಕಾಶನ್, ಕೆ.ಟಿ ರಾಜನ್, ಪಿ.ಕೆ ಶ್ರೀಜಿತ್, ಎಂ.ನಾರಾಯಣನ್ ಜೊತೆಗಿದ್ದರು.

