ಮಂಜೇಶ್ವರ: ವಾಮಂಜೂರು ಗುಡ್ಡೆ ಶಾಲಾ ರಸ್ತೆ ಬಂದ್; ಸ್ಥಳೀಯರಿಂದ ಪ್ರತಿಭಟನೆ
ಮಂಜೇಶ್ವರ,ಮಾ.4: ಹೊಸಂಗಡಿ ಸಮೀಪದ ವಾಮಂಜೂರ್ ಗುಡ್ಡೆ ಶಾಲಾ ರಸ್ತೆಯನ್ನು ಬಂದ್ ಮಾಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡೆಯನ್ನು ಖಂಡಿಸಿ ಸ್ಥಳೀಯರು ಸೋಮವಾರ ಹೊಸಂಗಡಿ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಲಕ್ಕಿ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶೇಖ್ ಉಸ್ಮಾನ್ ಅವರು, ರಾಷ್ಟ್ರೀಯ ಹೆದ್ದಾರಿ ಇಲಾಖೆ ಅವೈಜ್ಞಾನಿಕ ರಸ್ತೆ ಕಾಮಗಾರಿಯನ್ನು ಮಾಡಿದೆ. ಎರಡು ವರ್ಷಗಳಿಂದ ಈ ಭಾಗದ ಜನರು ರಸ್ತೆ ಸಂಪರ್ಕ ಇಲ್ಲದೆ ನಿತ್ಯ ಸಮಸ್ಯೆ ಎದುರಿಸುವಂತಾಗಿದೆ ಎಂದರು.
ಸ್ಥಳೀಯ ಮುಖಂಡ ಅಬ್ದುಲ್ ಹಮೀದ್ ಅವರು ಮಾತನಾಡಿ, ಕಳೆದ ಎರಡು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಿಸಿದ್ದಾರೆ. ಇದರಿಂದಾಗಿ ಒಂದು ಗ್ರಾಮಕ್ಕೆ ಸಂಪರ್ಕವೇ ಇಲ್ಲದಂತಾಗಿದೆ. ಮಾತ್ರವಲ್ಲದೆ 6 ಕೀ.ಮಿ ದೂರದ ವರೆಗೆ ರಸ್ತೆ ಮೂಲಕ ಸಂಚಾರ ಮಾಡುವ ದುಸ್ಥಿತಿ ನಮ್ಮದಾಗಿದೆ. ಇದು ಸರ್ಕಾರಿ ಶಾಲೆಯನ್ನು ಸಂಪರ್ಕಿಸುವ ರಸ್ತೆಯಾಗಿದ್ದು, ಸರಿಸುಮಾರು ನೂರಕ್ಕೂ ಅಧಿಕ ಮನೆಗಳು ಇಲ್ಲಿವೆ. ವಿದ್ಯಾರ್ಥಿಗಳು ಹಿರಿಯರು ಸಂಚಾರಕ್ಕೆ ನರಕಯಾತನೆ ಅನುಭವಿಸುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಂಡು ಹೊಸಂಗಡಿ ವಾಮಂಜೂರಿಗೆ ಮರು ರಸ್ತೆ ಸಂಪರ್ಕ ಕಲ್ಪಿಸಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಮಟ್ಟದ ಪ್ರತಿಭಟನೆ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಸ್ಥಳೀಯ ಶಾಲಾ ಮುಖ್ಯೋಪಾಧ್ಯಾಯಿನಿ ಸೇವಿಯ ಮೋಂತೆರೋ ಮಾತನಾಡಿ, ಈ ರಸ್ತೆ ಕಾಮಗಾರಿಗೆ ಮುಂಚಿತವಾಗಿ ಇಲಾಖಾಧಿಕಾರಿಗಳು ಬಂದು ಈ ಭಾಗದ ಜನರಿಗೆ ಮತ್ತು ಶಾಲೆಗೆ ಸಮರ್ಪಕ ರಸ್ತೆ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದ್ದರು. ಆದರೆ ಕಾಮಗಾರಿಯ ಬಳಿಕ ನಮ್ಮ ಶಾಲೆಗೆ ರಸ್ತೆ ಇಲ್ಲದೆ ಶಾಲೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಈ ಬಗ್ಗೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಪಿಡಿಪಿ ಸದಸ್ಯ ಹನೀಫ್, ವ್ಯಾಪಾರಿ ವ್ಯವಸಾಯ ಏಕೋಪನ ಸಮತಿ ಅಧ್ಯಕ್ಷ ಬಶೀರ್, ಎಸ್ ಡಿಪಿಐ ಜಿಲ್ಲಾಧ್ಯಕ್ಷ ಇಕ್ಬಾಲ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.