ಉಪ್ಪಳ: ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಅಗ್ನಿ ಅನಾಹುತ
Update: 2024-02-21 14:27 GMT
ಕಾಸರಗೋಡು: ಉಪ್ಪಳ ಸಮೀಪದ ಕುಬಣೂರು ತ್ಯಾಜ್ಯ ಸಂಸ್ಕರಣಾ ಘಟಕ ದಲ್ಲಿ ಬುಧವಾರ ಸಂಜೆ ಮತ್ತೆ ಅಗ್ನಿ ಅನಾಹುತ ಉಂಟಾಗಿದ್ದು, ಅಗ್ನಿ ಶಾಮಕ ದಳದ ಸಿಬಂದಿಗಳು ಬೆಂಕಿ ಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.
ವಾರದ ಅವಧಿಯಲ್ಲಿ ಎರಡನೇ ಅಗ್ನಿ ಅನಾಹುತ ಉಂಟಾಗಿದೆ. ಉಪ್ಪಳ ಹಾಗೂ ಕಾಸರಗೋಡಿನಿಂದ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಗಂಟೆಗಳ ಕಾಲ ಹರಸಾಹಸ ದಿಂದ ಬೆಂಕಿಯನ್ನು ನಂದಿಸಿದರು. ಉಪ್ಪಳ ಪೇಟೆಯನ್ನು ಒಳಗೊಂಡ ಮಂಗಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ತ್ಯಾಜ್ಯವನ್ನು ಕಳೆದ ಹಲವು ವರ್ಷಗಳಿಂದ ಕುಬಣೂರುನಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ತಂದು ಹಾಕಲಾಗುತ್ತಿದೆ. ಈ ಘಟಕದ ಸುತ್ತಮುತ್ತ ಹಾಕಲಾಗಿರುವ ತ್ಯಾಜ್ಯ ಅಗ್ನಿ ಅನುಹುತಕ್ಕೆ ಒಳಗಾಗುತ್ತಿದ್ದು ಪರಿಸರ ವಾಸಿಗಳು ದುರ್ನಾತ ಹಾಗೂ ಹೊಗೆಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ.