ಕಾಸರಗೋಡು: ಆಸ್ಪತ್ರೆಯ ಜನರೇಟರ್‌ನ ಹೊಗೆಯಿಂದ ಸಮೀಪದ ಶಾಲೆಯ ಹಲವು ವಿದ್ಯಾರ್ಥಿಗಳು ಅಸ್ವಸ್ಥ
ಕಾಸರಗೋಡು: ಆಸ್ಪತ್ರೆಯ ಜನರೇಟರ್ ನ ಹೊಗೆಯಿಂದ ಸಮೀಪದ ಶಾಲೆಯೊಂದರ ಹಲವು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಹೊಸದುರ್ಗದಲ್ಲಿ ನಡೆದಿದೆ.
ಹೊಸದುರ್ಗದ ಹೊಸಕೋಟೆಯಲ್ಲಿರುವ ಮಕ್ಕಳ ಮತ್ತು ಮಹಿಳಾ ಆಸ್ಪತ್ರೆಯ ಜನರೇಟರ್‌ನ ಹೊಗೆಯಿಂದ ಈ ಘಟನೆ ನಡೆದಿದೆ ಎಂದು ದೂರಲಾಗಿದೆ. ಕಾಞಿಂಗಾಡ್ ಲಿಟ್ಲ್ ಫ್ಲವರ್ ಗರ್ಲ್ಸ್ ಸ್ಕೂಲ್ ವಿದ್ಯಾರ್ಥಿಗಳು ಅಸ್ವಸ್ಥಗೊಂಡವರು.
ಆಸ್ಪತ್ರೆಯ ಸಮೀಪದ ಈ ಶಾಲೆಯ 50ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಸಿರಾಟ ಸಮಸ್ಯೆ, ವಾಂತಿ, ತಲೆ ನೋವು ಕಾಣಿಸಿ ಕೊಂಡಿದ್ದು, ಕೂಡಲೇ ವಿವಿಧ ಆಸ್ಪತ್ರೆಗಳಿಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.
ಉಪ ಜಿಲ್ಲಾಧಿಕಾರಿ ಸೂಫಿಯಾನ್ ಅಹಮ್ಮದ್, ಜಿಲ್ಲಾ ವೈದ್ಯಾಧಿಕಾರಿ ಡಾ. ಎ. ವಿ ರಾಮದಾಸ್ ಮೊದಲಾದವರು ಆಸ್ಪತ್ರೆ ಹಾಗೂ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
ಘಟನೆ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ ಉಪ ಜಿಲ್ಲಾಧಿಕಾರಿ ಸೂಫಿಯಾನ್ ಅಹಮ್ಮದ್ ರಿಗೆ ಸೂಚನೆ ನೀಡಿದ್ದಾರೆ.