ಕಾಸರಗೋಡು: ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ ಕಾರ್ಯಕ್ರಮ

Update: 2024-07-13 18:09 GMT

ಕಾಸರಗೋಡು: ಕನ್ನಡಿಗರು ಎಲ್ಲಿಯೇ ಇದ್ದರೂ ಅವರು ಕನ್ನಡಿಗರೆಂದರೆ ಕನ್ನಡಿಗರು. ಹೊರನಾಡು, ಒಳನಾಡು, ವಿದೇಶದ ಕನ್ನಡಿಗರು ಎಂಬ ಭೇದ ಸಲ್ಲದು. ಕಾಸರಗೋಡಿನ ಕನ್ನಡಿಗರು ಕನ್ನಡದ ಮೇಲೆ ಅಭಿಮಾನವಿಟ್ಟುಕೊಂಡು ಕನ್ನಡದ ಕಂಪನ್ನು ಹರಡುತ್ತಿದ್ದಾರೆ ಎಂದು ಮುಖ್ಯ ಮಂತ್ರಿಯ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದ್ದಾರೆ.

ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರಕಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇವರ ಸಹಯೋಗದಲ್ಲಿ ಶನಿವಾರ ಸೀತಾಂಗೋಳಿ ಅಲಯನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜರಗಿದ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ನಾವು ರಾಜ್ಯೋತ್ಸವದ ಕನ್ನಡಿಗರಾಗ ಬಾರದು. ಭಾಷೆಯ ಅಭಿವೃದ್ಧಿಯ ಕೆಲಸವನ್ನು ತೋರಿಕೆಗೆ ಮಾಡಿದರೆ ಅದು ಯಶಸ್ವಿಯಾಗದು. ಮನಃಪೂರ್ವಕವಾಗಿ, ಹೃದಯಪೂರ್ವಕವಾಗಿ ನಡೆಯಬೇಕು. ಕಾಸರಗೋಡಿನ ಕನ್ನಡಿಗರು ಹೃದಯ ಪೂರ್ವಕವಾಗಿ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಹೀಗಾಗಿ ಅವರು ಮಾಡುವ ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ. ಕಾಸರಗೋಡಿನ ಪತ್ರಕರ್ತರು ಕಳೆದ ಮೂರು ವರ್ಷಗಳಿಂದ ಮಾದರಿಯಾದ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಕರ್ನಾಟಕದ ಗ್ರಾಮೀಣ ಪತ್ರಕರ್ತರ ಬಹುಕಾಲದ ಬೇಡಿಕೆಯಾಗಿರುವ ಬಸ್ ಪಾಸ್ ಸೌಲಭ್ಯ ನೀಡುವ ಯೋಜನೆ ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿದೆ. ಇದರಲ್ಲಿ ಕಾಸರಗೋಡಿನ ಪತ್ರಕರ್ತರನ್ನು ಸೇರಿಸುವ ನಿಟ್ಟಿನಲ್ಲಿ ಯೋಚಿಸಲಾಗುವುದು. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಗಡಿಪ್ರಾಧಿಕಾರದ ನೆರವಿನಲ್ಲಿ‌ ಕೆಯುಡಬ್ಲ್ಯುಜೆ ಸಹಕಾರ ದೊಂದಿಗೆ ಕಾಸರಗೋಡಿನ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ ಒದಗಿಸಲಾಗುವುದು. ಎಂದು ಹೇಳಿದರು.

ಕಾಸರಗೋಡಿನ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 25 ಲಕ್ಷ ರೂ. ಒದಗಿಸುವ ಬೇಡಿಕೆಯ ಈಡೇರಿಸುವ ಬಗ್ಗೆ ಮುಖ್ಯ ಮಂತ್ರಿ ಜೊತೆ ಮಾತನಾಡುವುದಾಗಿ ಭರವಸೆ ನೀಡಿದರು.

ಕನ್ನಡ ಕೆಲಸ ಏನೇ ಇರಲಿ ಕರ್ನಾಟಕ ಸರಕಾರ ಸದಾ ನಿಮ್ಮೊಂದಿಗಿದೆ. ಸರಕಾರದ ನೆರವು ದೊರಕಿಸಿಕೊಡಲು ಶ್ರಮಿಸುವುದಾಗಿ ಭರವಸೆ ನೀಡಿದರು.

ಕೆಯುಡಬ್ಲ್ಯುಜೆ ಕರ್ನಾಟಕ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಕನ್ನಡವನ್ನು ಉಳಿಸುವತ್ತ ದಿಟ್ಟಹೆಜ್ಜೆಯನ್ನಿಟ್ಟು ಮುಂದುವರಿಯುತ್ತಿರುವ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಬೇಡಿಕೆ ಬಗ್ಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.

ನ್ಯಾಯವಾದಿ ಎಂ.ಎಸ್.ಥೋಮಸ್ ಡಿಸೋಜ ಅವರ ಕೃತಿ ಸೀತಾಂಗೋಳಿಯ ಗತವೈಭವ ಹಾಗೂ ಕೆ.ರಾಮಚಂದ್ರ ಬಲ್ಲಾಳ್ ಸಂಪಾದಕತ್ವದ ಕೇರಳ ರಾಜ್ಯದ ಏಕೈಕ ಕನ್ನಡ ಕಲಿಕಾ ಮಾರ್ಗದರ್ಶಿ `ಜ್ಞಾನದೀವಿಗೆ' ಕೃತಿಗಳನ್ನು ಬಿಡುಗಡೆ ಗೊಳಿಸಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಮಾಜಿ ಶಾಸಕ ಸೋಮಣ್ಣ ಬೇವಿನಮರದ ಅವರು ಮಾತನಾಡಿ ಕಾಸರಗೋಡಿನ ಕನ್ನಡದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಹೆಮ್ಮೆಯೆನಿಸುತ್ತದೆ. ಕನ್ನಡ ಪರ ಉತ್ಸವ ಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಇಲ್ಲಿನ ಕನ್ನಡಿಗರ ಪರವಾಗಿ ನಾವಿದ್ದೇವೆ. ಗಡಿನಾಡಿನ ಅನೇಕರು ನೀಡಿದ ಮನವಿಗಳಿಗೆ ಸೂಕ್ತ ಅನುದಾನವನ್ನು ಕಲ್ಪಿಸುವಲ್ಲಿ ಸರಕಾರದ ಗಮನಸೆಳೆಯುತ್ತೇವೆ ಎಂದರು.

ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅವರು ಮಾತನಾಡಿ ಕರ್ನಾಟಕದ ಹಲವಾರು ವಲಯಗಳಲ್ಲಿ ಮಿನುಗುತ್ತಿರುವ ನಕ್ಷತ್ರಗಳು ಇಂದು ಕಾಸರಗೋಡಿನ ಕನ್ನಡದ ನೆಲದಲ್ಲಿ ಜೊತೆಗೂಡಿದ್ದೇವೆ. ಗಡಿನಾಡಿನ ಶಾಲೆಗಳ ಅಭಿವೃದ್ಧಿಗೆ ಪೂರಕ ವಾದ ಚಟುವಟಿಕೆಗಳಿಗೆ ಕರ್ನಾಟಕ ಸರಕಾರದ ಅನುದಾನವನ್ನು ಕಲ್ಪಿಸಬೇಕು. ಕನ್ನಡದಲ್ಲಿ ಕಲಿತ ಗಡಿನಾಡ ಮಕ್ಕಳಿಗೆ ಸಿಗಬೇಕಾದ ಎಲ್ಲಾಸೌಲಭ್ಯಗಳನ್ನು ನೀಡುವಲ್ಲಿ ಮನಮಾಡಬೇಕು ಎಂದರು.

ಮ೦ಜುನಾಥ ಆಳ್ವ ಮಡ್ವ, ಪೃಥ್ವಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ಗೌರವ ಅತಿಥಿಗಳಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಭಗತ ರಾಜ್ ನಿಜಾಮಕರ್, ಡಾ. ಸಂಜೀವಕುಮಾರ್ ಅತಿವಾಲೆ, ಶಿವರೆಡ್ಡಿ ಖ್ಯಾಡೆದ್, ಹಿರಿಯ ಪತ್ರಕರ್ತರು, ಸಾಹಿತಿಗಳು ಡಾ. ಸದಾನಂದ ಪೆರ್ಲ, ಬೇಳ ಶೋಕ ಮಾತಾ ದೇವಾಲಯ ಬೇಳ ಪ್ರಧಾನ ಧರ್ಮ ಗುರುಗಳು ಅತೀ ವಂ. ಸ್ಟ್ಯಾನಿ ಪಿರೇರಾ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಕಾಸರಗೋಡು ಸಾಮಾಜಿಕ ಧಾರ್ಮಿಕ ಮುಖಂಡ ಅರಿಬೈಲು ಗೋಪಾಲ್ ಶೆಟ್ಟಿ, ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯೆ ಜಮೀಲಾ ಸಿದ್ದೀಕ್ ದಂಡೆ ಗೋಳಿ, ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯ ಸುಕುಮಾರ ಕುದ್ರೆಪಾಡಿ, ಬದಿಯಡ್ಕ ಗ್ರಾಮ್ ಪಂಚಾಯಿತಿ ಸದಸ್ಯರು ಶಂಕರ ಡಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಧ್ಯಾಗೀತಾ ಬಾಯಾರು ಪ್ರಾರ್ಥನೆ ಹಾಡಿದರು. ಸ್ವಾಗತಸಮಿತಿ ಪ್ರಧಾನ ಸಂಚಾಲಕ ನ್ಯಾಯವಾದಿ ಎಂ.ಎಸ್.ಥೋಮಸ್ ಸ್ವಾಗತಿಸಿ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಪ್ರಧಾನ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ ವಂದಿಸಿದರು.

ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ರವಿ ನಾಯ್ಕಾಪು ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಫೀಕ್ ಮಾಸ್ಟರ್ ಮಂಗಳೂರು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯೋಗನೃತ್ಯ, ನೃತ್ಯಗಳು, ತಿರುವಾದಿರ, ವಿಮಿಕ್ರಿ, ಗೀತಾ ಸಾಹಿತ್ಯ ಸಂಭ್ರಮ ಜರಗಿತು.

* ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ ಕೊಡುಗೈ ದಾನಿ, ಸಮಾಜಸೇವಕ, ಧಾರ್ಮಿಕ ಹರಿಕಾರ ಕೆ.ಕೆ.ಶೆಟ್ಟಿ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ವಾಸ್ತುಶಿಲ್ಪಿ ರವೀಂದ್ರ ಕುಮಾರ್ ಬೆಂಗಳೂರು ಇವರಿಗೆ ಪೌರಸನ್ಮಾನ ನೀಡಿ ಗೌರವಿಸಲಾಯಿತು.

ಶೋಭಾ ಯಾತ್ರೆಗೆ ಪುತ್ತಿಗೆ ಗ್ರಾಮಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಆಳ್ವ ಡಮರು ಬಾರಿಸುವ ಮೂಲಕ ಚಾಲನೆಯನ್ನು ನೀಡಿದರು. ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆರನ್ನು ಅಭಿನಂದಿಸಲಾಯಿತು.

ದತ್ತಿನಿಧಿ ಪ್ರಶಸ್ತಿ ಪ್ರದಾನ

ಚೇತನ ಬೆಳಗೆರೆ (ಹ ವ್ವಾ ಸೇವಾ ಟ್ರಸ್ಟ್ ಹುಬ್ಬಳ್ಳಿ ದತ್ತಿನಿದಿ ಪ್ರಶಸ್ತಿ), ಅಶೋಕ್ ಚಂದರಗಿ (ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಡಾ. ಸೋಮಶೇಖರ್ ನೀಡುವ ದತ್ತಿನಿದಿ ಪ್ರಶಸ್ತಿ),, ಬಿ. ರವೀಂದ್ರ ಶೆಟ್ಟಿ(ಹವ್ವಾ ಹಸನ್ ಫೌಂಡೇಶನ್ ಕುದ್ಕೊಳಿ ಸಂಸ್ಥಾಪಕ ಅಬ್ದುಲ್ಲಾ ಮಾದು ಮೂಲೆ ನೀಡುವ ದತ್ತಿನಿಧಿ ಪ್ರಶಸ್ತಿ) ಜಿ. ಸುಬ್ರಾಯ ಭಟ್ (ಅನಿವಾಸಿ ಉದ್ಯಮಿ ಕಲಾಪೋಷಕ ಜೋಸೆಫ್ ಮಾಥಿಯಾಸ್ ನೀಡುವ ದತ್ತಿನಿಧಿ ಪ್ರಶಸ್ತಿ), ಇಬ್ರಾಹಿಂ ಅಡ್ಕಸ್ಥಳ (ಕೆ ವಿ ಆರ್ ಠ್ಯಾಗೋರ್ ಸ್ಮರಣಾರ್ಥ ಭಾಗ್ಯ ಠ್ಯಾಗೋರ್ ನೀಡುವ ದತ್ತಿ ನಿಧಿ ಪ್ರಶಸ್ತಿ) ವಾಲ್ಟರ್ ನಂದಳಿಕೆ (ಶತಾಯುಷಿ ಸ್ವಾತಂತ್ರ‍್ಯ ಹೋರಾಟಗಾರ ಮಾಜಿ ಸಚಿವ ಭೀಮಣ್ಣ ಖಂಡ್ರೆ ಇವರ ಹೆಸರಿನ ದತ್ತಿನಿದಿ ಪ್ರಾಯೋಜಕರು ದೀಪಕ್ ವಿ.ಕೆ), ಹೆಚ್ ಬಿ. ಮದನ್ ಗೌಡ (ಡಾ. ಸುಧಾಕರ್ ಶೆಟ್ಟಿ ಪುಣೆ, ಹಿರಿಯ ಮಕ್ಕಳ ತಜ್ಞ ನೀಡುವ ದತ್ತಿನಿಧಿ ಪ್ರಶಸ್ತಿ), ಮುಂಬಯಿ ಪತ್ರಕರ್ತ ನವೀನ್ ಕೆ. ಮೊಹಮ್ಮದ್ ಇಬ್ರಾಹಿಂ ಪಾರ ಸ್ಮರಣಾರ್ಥ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲ ನೀಡುವ ದತ್ತಿನಿಧಿ ಪ್ರಶಸ್ತಿ) ನಂದಕುಮಾರ್ ಹೆಗಡೆ (ಮೊಗರೊಡಿ ಗೋಪಾಲಕೃಷ್ಣ ಮೇಲಾಂಟ ಸ್ಮರಣಾರ್ಥ ಹರ್ಷ ಮೇಲಾಂಟ ನೀಡುವ ದತ್ತಿನಿಧಿ ಪ್ರಶಸ್ತಿ), ಹೆಚ್ ಟಿ. ಅನಿಲ್ ಮಡಿಕೇರಿ( ಉದ್ಯಮಿ ಸಮಾಜಸೇವಕ ಆಶ್ರಫ್ ಶಾ ಮಂತೂರು ನೀಡುವ ದತ್ತಿನಿಧಿ ಪ್ರಶಸ್ತಿ), ಸದಾನಂದ ಜೋಶಿ ಬೀದರ್ (ನವಿಮುಂಬಯಿ ಧರ್ಮದರ್ಶಿಅಣ್ಣಿ ಸಿ.ಶೆಟ್ಟಿ ನೀಡುವ ದತ್ತಿನಿಧಿ ಪ್ರಶಸ್ತಿ), ದಿವಾಕರ ಬಿ. ಶೆಟ್ಟಿ ಕಾಪು(ಕೆ.ಯು ಡಬ್ಲ್ಯೂ ಜೆ. ರಾಜ್ಯ ಸಮಿತಿ ನೀಡುವ ದತ್ತಿನಿಧಿ ಪ್ರಶಸ್ತಿ) ಬಿ.ಪಿ. ಶೇಣಿ(ಕೆ.ಯು.ಡಬ್ಲ್ಯೂಜೆ ರಾಜ್ಯ ಸಮಿತಿ ನೀಡುವ ದತ್ತಿನಿಧಿ ಪ್ರಶಸ್ತಿ) ಇವರಿಗೆ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಯಿತು.












 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News