ಚುನಾವಣಾ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಪ್ರಕರಣ: ಮಂಜೇಶ್ವರ ಶಾಸಕ ಸಹಿತ ನಾಲ್ವರಿಗೆ 1 ವರ್ಷ 3 ತಿಂಗಳು ಶಿಕ್ಷೆ, ದಂಡ

Update: 2023-10-31 18:06 GMT

ಕಾಸರಗೋಡು, ಅ.31: ಚುನಾವಣಾ ಅಧಿಕಾರಿಯಾಗಿದ್ದ ಉಪ ತಹಶೀಲ್ದಾರ್‌ರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಸಹಿತ ನಾಲ್ವರಿಗೆ ಕಾಸರಗೋಡು ಜ್ಯುಡಿಶಿಯಲ್ ಪ್ರಥಮ ದರ್ಜೆ ನ್ಯಾಯಾಲಯ ಒಂದು ವರ್ಷ ಮೂರು ತಿಂಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಜೊತೆಗೆ 20 ಸಾವಿರ ರೂ. ದಂಡ ವಿಧಿಸಲಾಗಿದೆ.

ಶಾಸಕ ಎ.ಕೆ.ಎಂ.ಅಶ್ರಫ್ ಅಲ್ಲದೆ ಬಶೀರ್, ಅಬ್ದುಲ್ಲ, ಅಬ್ದುಲ್ ಖಾದರ್ ಶಿಕ್ಷೆಗೊಳಗಾದ ಇತರರಾಗಿದ್ದಾರೆ. ಶಿಕ್ಷೆ ಘೋಷಿಸಿದ ಬೆನ್ನಲ್ಲೇ ಶಾಸಕ ಸೇರಿದಂತೆ ನಾಲ್ವರು ಜಾಮೀನು ಪಡೆದಿದ್ದಾರೆ.

2010ರ ನವಂಬರ್ 25ರಂದು ಬೆಳಗ್ಗೆ ಘಟನೆ ನಡೆದಿದ್ದು, ಮಂಜೇಶ್ವರ ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ಮತದಾ ರರ ಪಟ್ಟಿ ಪರಿಷ್ಕರಣೆ ಸಂದರ್ಭ ಪಟ್ಟಿಯಲ್ಲಿ ಓರ್ವನ ಹೆಸರು ಸೇರ್ಪಡೆಗೆ ಅರ್ಜಿಯಲ್ಲಿ ಕೆಲ ಲೋಪ ಇರುವುದಾಗಿ ಅಧಿಕಾರಿಗಳು ತೆಗೆದಿರಿಸಿದ್ದರು. ಅಂದಿನ ಕಾಸರಗೋಡು ಉಪ ತಹಶೀಲ್ದಾರ್ ಆಗಿದ್ದ ದಾಮೋದರನ್ ಸೇರಿದಂತೆ ಇತರ ಅಧಿಕಾರಿಗಳು ಕರ್ತವ್ಯದಲ್ಲಿದ್ದರು. ಅರ್ಜಿಯನ್ನು ತೆಗೆದಿರಿಸಿದ್ದನ್ನು ಅಶ್ರಫ್ ಸೇರಿದಂತೆ ನಾಲ್ವರು ಪ್ರಶ್ನಿಸಿದ್ದು, ಮಾತಿನ ಚಕಮಕಿ ನಡೆದಿತ್ತು. ಅಲ್ಲದೆ ಉಪ ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕುರ್ಚಿಗಳನ್ನು ಎಸೆದಿರುವುದಾಗಿ ಅಂದು ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಎ.ಕೆ.ಎಂ.ಅಶ್ರಫ್, ಪಂಚಾಯತ್ ಸದಸ್ಯರಾಗಿದ್ದ ಅಬ್ದುಲ್ಲ, ಬಶೀರ್ ಸೇರಿದಂತೆ ನಾಲ್ವರ ಮೇಲೆ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ನಡೆಸಿದ್ದಾಗಿ ಪ್ರಕರಣ ದಾಖಲಿಸಲಾಗಿತ್ತು.

ತೀರ್ಪಿನ ವಿರುದ್ಧ ಮೇಲ್ಮನವಿ: ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಶಾಸಕ ಎ.ಕೆ.ಎಂ.ಅಶ್ರಫ್ ತಿಳಿಸಿದ್ದಾರೆ. ಇದು ಅನಿರೀಕ್ಷಿತ ತೀರ್ಪು ಆಗಿದ್ದು, 13 ವರ್ಷಗಳ ಹಳೆಯ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಇಂದು ತೀರ್ಪು ನೀಡಲಾಗಿದೆ. ಈ ಬಗ್ಗೆ ಪರಿಶೀಲಿಸಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವುದಾಗಿ ಅಶ್ರಫ್ ತಿಳಿಸಿದ್ದಾರೆ.

ಶಿಕ್ಷೆಯ ಪ್ರಮಾಣ ಎರಡು ವರ್ಷಕ್ಕಿಂತ ಕಡಿಮೆ ಇರುವುದರಿಂದ ಎ.ಕೆ.ಎಂ.ಅಶ್ರಫ್‌ರ ಶಾಸಕ ಸ್ಥಾನಕ್ಕೆ ಯಾವುದೇ ಅಡ್ಡಿಯಾಗದು ಎನ್ನಲಾಗಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಕನಿಷ್ಠ ಎರಡು ವರ್ಷ ಶಿಕ್ಷೆಗೊಳಗಾದರೆ ಮಾತ್ರವೇ ಶಾಸಕ ಸ್ಥಾನ ಅನರ್ಹಗೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News