ಮುಂಬೈಯಲ್ಲಿ ರಸ್ತೆ ಅಪಘಾತ: ಕಾಸರಗೋಡು ಕಯ್ಯಾರ್ ನಿವಾಸಿ ಮೃತ್ಯು

Update: 2024-02-24 05:31 GMT

ಕಾಸರಗೋಡು, ಫೆ.24: ಮುಂಬೈಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಯ್ಯಾರ್ ನಿವಾಸಿಯೊಬ್ಬರು ಮೃತಪಟ್ಟಿರುವುದು ವರದಿಯಾಗಿದೆ.

ಕಯ್ಯಾರ್ ಚನ್ನಿಕುಡೇಲ್ ನ ದಿವಂಗತ ಮಾರ್ಸೆಲ್ ಮತ್ತು ಲೀನಾ ಕ್ರಾಸ್ತಾ ದಂಪತಿಯ ಪುತ್ರ ರೂಬನ್ ಚಾರ್ಲ್ಸ್ ಕ್ರಾಸ್ತಾ (39) ಮೃತಪಟ್ಟವರು.

ಮುಂಬೈನಲ್ಲಿ ಉದ್ಯಮಿಯಾಗಿದ್ದ ಇವರು ಶುಕ್ರವಾರ ಸಂಜೆ ಬೈಕಿನಲ್ಲಿ ಸಂಚರಿಸುತ್ತಿದ್ದ ವೇಳೆ ಅಫಘಾತ ಸಂಭವಿಸಿದೆ. ರೂಬನ್ ಸಂಚರಿಸುತ್ತಿದ್ದ ಬೈಕ್ ಸ್ಕಿಡ್ ಆಗಿದೆ. ಈ ವೇಳೆ ರಸ್ತೆಗೆ ಬಿದ್ದ ರೂಬನ್ ಅವರ ಮೇಲೆ ಲಾರಿಯೊಂದು ಹರಿದ ಪರಿಣಾಮ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರೂಬನ್ ಕಳೆದ 23 ವರ್ಷಗಳಿಂದ ಮುಂಬೈಯಲ್ಲಿ ಉದ್ಯಮ ನಡೆಸುತ್ತಿದ್ದು, ಮೂರು ತಿಂಗಳ ಹಿಂದೆಯಷ್ಟೇ ಊರಿಗೆ ಬಂದು ಮರಳಿದ್ದರು.

ಮೃತದೇಹವನ್ನು ಇಂದು ಊರಿಗೆ ತರಲಾಗುತ್ತಿದ್ದು, ಫೆ.25ರ ಸಂಜೆ 4 ಗಂಟೆಗೆ ಕಯ್ಯಾರ್ ಕ್ರಿಸ್ತರಾಜ ದೇವಾಲಯದ ಸ್ಮಶಾನ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತರು ಪತ್ನಿ, ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News