ಪದ್ಮಶ್ರೀ ಪುರಸ್ಕೃತ ಕಾಸರಗೋಡಿನ ಸತ್ಯನಾರಾಯಣ ಬೆಳೇರಿ: ಪರಿಚಯ ಇಲ್ಲಿದೆ…

Update: 2024-01-25 17:56 GMT

ಸತ್ಯನಾರಾಯಣ ಬೆಳೇರಿ

ಕಾಸರಗೋಡು : ಜಿಲ್ಲೆಯ ಬೆಳ್ಳೂರು ಗ್ರಾಮ ಪಂಚಾಯತಿನ ನೆಟ್ಟಣಿಗೆ ಗ್ರಾಮದ ಸಾಧಾರಣ ಕೃಷಿ ಕುಟುಂಬ ಹಿನ್ನೆಲೆಯ ಸತ್ಯನಾರಾಯಣ ಬೆಳೇರಿ ಅವರಿಗೆ 2024ನೇ ಸಾಲಿನ ಪದ್ಮಶೀ ಪ್ರಶಸ್ತಿ ಘೋಷಿಸಲಾಗಿದೆ.

ಕಳೆದ 12 ವರ್ಷಗಳಿಂದ ಮರೆಯಾಗುತ್ತಿರುವ ದೇಸಿ ಭತ್ತದ ತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಯಲ್ಲಿ ಅವರು ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.

ದಶಕಗಳ ಹಿಂದೆ ಹಿರಿಯ ಗಾಂಧಿವಾದಿ, ಕೃಷಿ ತಪಸ್ವಿ ಚೇರ್ಕಾಡಿ ರಾಮಚಂದ್ರರಾಯರು ನೀಡಿದ ಒಂದು ಮುಷ್ಟಿಯಷ್ಟು ʻರಾಜಕಯಮೆʻ ಎಂಬ ದೇಸಿ ಭತ್ತದ ತಳಿಯೊಂದಿಗೆ ಆರಂಭವಾದ ಇವರ ಕೆಲಸ ಪ್ರಸ್ತುತ 650ಕ್ಕೂ ಹೆಚ್ಚಿನ ತಳಿಗಳ ಸಂರಕ್ಷಣೆಯವರೆಗೆ ತಲುಪಿದೆ.

ರಾಜಕಯಮ, ಗಂಧಸಾಲೆ, ಅತಿಕಾರ, ಸುಗ್ಗಿಕಯಮೆ, ನವರ, ಮೈಸೂರು ರಾಜರು ಬಳಸುತ್ತಿದ್ದ ರಾಜಮುಡಿ ಮತ್ತು ರಾಜಭೋಗ, ಉಪ್ಪು ನೀರಿನಲ್ಲಿಯೂ ಬೆಳೆಯುವ ಕಗ್ಗ, ಬರನಿರೋಧಕ ಪುಟ್ಟ ಭತ್ತ, ಅವಲಕ್ಕಿಗೆ ಬೇಕಾದ ಸ್ವರಬಾ, ಫಿಲಿಪೈನ್ಸ್ ದೇಶದ ಮನಿಲಾ, ಸುಶ್ರುತನ ಕಾಲದ ಕಳಮೆ, ಬುದ್ಧನ ಕಾಲದ ಕಲಾನಾಮಕ್, ನೇರಳೆ ಬಣ್ಣದ ಡಾಂಬಾರ್ ಕಾಳ, ಕಾರ್ ರೆಡ್ ರೈಸ್, ಕಲಾಬತಿ, ನಜರ್ ಬಾತ್ ಅಲ್ಲದೇ ಮಣಿಪುರ, ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಒಡಿಶಾ ಸೇರಿದಂತೆ ಭಾರತದ ಹೆಚ್ಚಿನೆಲ್ಲಾ ಪ್ರದೇಶಗಳ ಭತ್ತದ ತಳಿಗಳ ಸಂಗ್ರಹ ಇವರಲ್ಲಿದೆ.

ಸ್ಥಳೀಯ ಬೀಜ ವೈವಿಧ್ಯವನ್ನು ಸಂರಕ್ಷಿಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳಗೆ ಕೇಂದ್ರ ಕೃಷಿ ಇಲಾಖೆಯು ನೀಡುವ Plant Genome Saviour Farmer Reward ಎಂಬ ರಾಷ್ಟ್ರೀಯ ಪುರಸ್ಕಾರಕ್ಕೆ ಇವರು ಪಾತ್ರರಾಗಿದ್ದಾರೆ. ಕೇಂದ್ರ ಕೃಷಿ ಸಚಿವರು ನವೆಂಬರ್ 11, 2021ರಂದು ದೆಹಲಿಯಲ್ಲಿ ನಡೆದ ಸಮಾರಂಭದಲ್ಲ 1.5 ಲಕ್ಷ ರೂಪಾಯಿ, ಪ್ರಶಸ್ತಿ ಫಲಕ, ಪ್ರಮಾಣ ಪತ್ರ ಒಳಗೊಂಡ ನೀಡಿ ಸನ್ಮಾನಿಸಿದ್ದಾರೆ.

ಕಸಿ ಕಟ್ಟುವಿಕೆ, ಜೇನು ಸಾಕಣಿಕೆ, ಗಾರೆ ಕೆಲಸ, ಮರದ ಕೆಲಸ, ಎಲೆಕ್ಟ್ರಿಕ್ ಮತ್ತು ಮೋಟಾರ್ ರಿವೈಂಡಿಂಗ್ ಕೆಲಸಗಳಲ್ಲೂ ಪರಿಣಿತರಾದ ಇವರಿಗೆ ಸಾಹಿತ್ಯದ ಅಭಿರುಚಿಯೂ ಇದೆ.

ತಳಿ ಸಂರಕ್ಷಣೆ ಸುಲಭದ ಕೆಲಸವಲ್ಲ. ತಳಿಗಳು ಹೆಚ್ಚೆಂದರೆ 6-8 ತಿಂಗಳ ಕಾಲ ಬಾಳ್ವಿಕೆ ಬರುತ್ತವೆ. ಆದುದರಿಂದ ವರ್ಷಕ್ಕೊಮ್ಮೆಯಾದರೂ ಇವುಗಳನ್ನು ಮಣ್ಣಲ್ಲಿ ಅದ್ದಿ, ಬೆಳೆದು ಹೊಸ ಬೀಜಗಳನ್ನು ಸಂಗ್ರಹಿಸಬೇಕಾಗುತ್ತದೆ. ಕ್ರಿಮಿ-ಕೀಟ, ಇಲಿಗಳ ಉಪಟಳ, ಸಮಯಕ್ಕೆ ಸರಿಯಾಗಿ ನೀಡಬೇಕಾದ ಗೊಬ್ಬರ, ಪೋಷಕಾಂಶಗಳು ಸೇರಿದಂತೆ ಈ ಕಾರ್ಯಕ್ಕೆ ನೀಡಬೇಕಾದ ಸಮಯ, ಸಂಯಮ, ಏಕಾಗ್ರತೆ ಊಹೆಗೂ ನಿಲುಕದ್ದು. ಕೃಷಿ ವಿಶ್ವವಿದ್ಯಾನಿಲಯಗಳು ಮಾಡಬೇಕಾದ ಕೆಲಸವನ್ನು ಇವರೊಬ್ಬರೇ ಅಚ್ಚುಕಟ್ಟಾಗಿ ಮಾಡುತ್ತಿರುವುದು ನಿಜಕ್ಕೂ ಭಗೀರಥ ಪ್ರಯತ್ನವೇ ಸರಿ.

ಪೂರಕ ಮಾಹಿತಿ : vikasatrust.org




Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News