ಕಾಸರಗೋಡು : 10 ದಿನಗಳ ಹಿಂದೆ ಕೀಯೂರಿನಲ್ಲಿ ಸಮುದ್ರಪಾಲಾಗಿದ್ದ ಯುವಕನ ಮೃತದೇಹ ತ್ರಿಶ್ಯೂರಿನಲ್ಲಿ ಪತ್ತೆ
ಕಾಸರಗೋಡು: ಕೀಯೂರು ಅಳಿವೆಬಾಗಿಲಿನಲ್ಲಿ 10 ದಿನಗಳ ಹಿಂದೆ ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ಇಂದು ಮಧ್ಯಾಹ್ನ ತ್ರಿಶ್ಯೂರು ಚಾವಕ್ಕಾ ಡ್ ನ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ.
ಚೆಮ್ನಾಡ್ ಕಲ್ಲುವಳಪ್ಪಿನ ಮುಹಮ್ಮದ್ ರಿಯಾಝ್ ಮೃತಪಟ್ಟವರು. ಆಗಸ್ಟ್ 31ರಂದು ಬೆಳಗ್ಗೆ ಗಾಳ ಹಾಕಿ ಮೀನು ಹಿಡಿಯುತ್ತಿದ್ದಾಗ ರಿಯಾಝ್ ಸಮುದ್ರಪಾಲಾಗಿದ್ದರು. ಕೆಲ ದಿನಗಳ ಕಾಲ ಕರಾವಳಿ ಪೊಲೀಸ್, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನಾಗರಿಕರು ಶೋಧ ನಡೆಸಿದ್ದರು. ಆದರೆ ಪತ್ತೆಯಾಗದ ಹಿನ್ನೆಲೆಯಲ್ಲಿ ಮುಳುಗು ತಜ್ಞರ ನೇತೃತ್ವದಲ್ಲಿ ಶೋಧ ನಡೆಸಲಾಗಿತ್ತು. ಬಳಿಕ ನೌಕಾ ಪಡೆಯು ಎರಡು ದಿನಗಳ ಕಾಲ ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ.
ಈ ನಡುವೆ ಸೋಮವಾರ ತ್ರಿಶೂರ್ ಚಾವಕ್ಕಾಡ್ ಸಮುದ್ರ ಕಿನಾರೆಯಲ್ಲಿ ಮೃತದೇಹವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ಯಾಂಟ್ ನಲ್ಲಿದ್ದ ಮೊಬೈಲ್ ಸಿಮ್ ಹಾಗೂ ಆತ ಧರಿಸಿದ್ದ ಜಾಕೆಟ್ ನ ನೆರವಿನಿಂದ ಗುರುತು ಪತ್ತೆ ಹಚ್ಚಲಾಗಿದೆ.
ಮಾಹಿತಿ ತಿಳಿದು ಸಂಬಂಧಿಕರು ತ್ರಿಶ್ಯೂರಿಗೆ ತೆರಳಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಇಂದು ರಾತ್ರಿ ಮೃತದೇಹ ಚೆಮ್ನಾಡ್ ಗೆ ತರುವ ಸಾಧ್ಯತೆ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.