ಉಪ್ಪಳ | ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ಪತ್ತೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ: ಎಸ್ಪಿ
ಕಾಸರಗೋಡು: ಉಪ್ಪಳ ಪತ್ವಾಡಿಯ ಮನೆಯೊಂದರಲ್ಲಿ ಕೋಟ್ಯ೦ತರ ರೂ. ಮೌಲ್ಯದ ಮಾದಕ ವಸ್ತು ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ . ಶಿಲ್ಪಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ಅಸ್ಗರ್ ಅಲಿ ಎಂಬಾತನನ್ನು ಬಂಧಿಸಲಾಗಿದೆ. ಆತನ ಸೊತ್ತುಗಳನ್ನು ಮುಟ್ಟುಗೋಲು ಹಾಕಲಾಗುವುದು ಎಂದರು.
ಅಸ್ಗರ್ ಅಲಿ ಮನೆಯಲ್ಲಿ ಮಾದಕ ವಸ್ತು ದಾಸ್ತಾನಿಟ್ಟಿರುವುದಾಗಿ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ದಾಳಿ ನಡೆಸಲಾಗಿದೆ ಎಂದು ಹೇಳಿದರು.
ಬಂಧಿತ ಅಸ್ಗರ್ ಅಲಿ ಮಧ್ಯವರ್ತಿಯಾಗಿಯಾಗಿದ್ದು, ಈ ದಂಧೆಯ ಹಿಂದೆ ಬೃಹತ್ ಜಾಲ ಕಾರ್ಯಾಚರಿಸುತ್ತಿದ್ದು, ಆ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಪತ್ವಾಡಿಯ ಮನೆಯಲ್ಲಿ ತಪಾಸಣೆ ನಡೆಸಿದಾಗ 3.40 ಕಿಲೋ ಎಂಡಿಎಂಎ , 640 ಗ್ರಾಂ ಗಾಂಜಾ, 97.97 ಗ್ರಾಂ ಕೊಕೈನ್ , 39 ಕ್ಯಾಫ್ಸೂಲ್ ಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆಯಲಾಗುವುದು ಎಂದು ಡಿ.ಶಿಲ್ಪಾ ತಿಳಿಸಿದರು .
ಮೇಲ್ಪರಂಬ ಪೊಲೀಸ್ ಇನ್ ಸ್ಪೆಕ್ಟರ್ ಎ.ಸಂತೋಷ್ ಕುಮಾರ್ , ಮಂಜೇಶ್ವರ ಠಾಣಾ ಸಬ್ ಇನ್ ಸ್ಪೆಕ್ಟರ್ ನಿಖಿಲ್ , ಸ್ಪೆಷಲ್ ಬ್ರಾಂಚ್ ಸೀನಿಯರ್ ಅಧಿಕಾರಿ ಪ್ರದೀಶ್ ಗೋಪಾಲನ್ , ಪ್ರದೀಪನ್ ಮೇಲ್ಪರಂಬ, ವಂದನಾ ಮಂಜೇಶ್ವರ , ಮಧು ಮಂಜೇಶ್ವರ, ಪ್ರಸಾದ್ ವಿದ್ಯಾನಗರ , ಧಣೇಶ್ ಮಂಜೇಶ್ವರ , ಸುಮೇಶ್ ರಾಜ್ , ನಿಧೀಶ್ ಮಂಜೇಶ್ವರ , ಪ್ರಶೋಭ್ , ನಿಧಿನ್ ಮಂಜೇಶ್ವರ , ಸಲಾಂ ಮಂಜೇಶ್ವರ ಮೊದಲಾದವರು ದಾಳಿ ನಡೆಸಿದ ತಂಡದಲ್ಲಿದ್ದರು ಎಂದು ಎಸ್ಪಿ ತಿಳಿಸಿದರು.