ಮಹಿಳೆಯರಿಗೆ ಅಪಮಾನ ಮಾಡಿರುವ ಎಚ್‌ಡಿಕೆಯಿಂದ ಕ್ಷಮೆ ಬಯಸಲ್ಲ, ಈ ಬಗ್ಗೆ ಪ್ರಧಾನಿಗಳೇ ಉತ್ತರ ನೀಡಬೇಕು : ಡಿ.ಕೆ.ಶಿವಕುಮಾರ್

Update: 2024-04-14 12:34 GMT

ಕೊಡಗು: “ರಾಜ್ಯದ ನನ್ನ ತಾಯಂದಿರು ಹಾಗೂ ಅಕ್ಕ, ತಂಗಿಯರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಅಪಮಾನ ಮಾಡಿದ್ದು, ಈ ವಿಚಾರವಾಗಿ  ಅವರು ಕ್ಷಮೆ ಕೇಳಬೇಕೆಂದು ನಾನು ಆಗ್ರಹಿಸುವುದಿಲ್ಲ. ಬದಲಿಗೆ ಪ್ರಧಾನಮಂತ್ರಿಗಳು ಹಾಗೂ ಎನ್ಡಿಎ ಮೈತ್ರಿಕೂಟದ ಸಚಿವೆಯರಾದ ನಿರ್ಮಲಾ ಸೀತರಾಮನ್, ಸ್ಮೃತಿ ಇರಾನಿ ಸ್ಪಷ್ಟನೆ ನೀಡಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಗ್ರಹಿಸಿದರು.

ಕೊಡಗಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರ ಪರವಾಗಿ ರವಿವಾರ ಪ್ರಚಾರ ನಡೆಸಿದ ಸಂದರ್ಭದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. 

“ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಪಕ್ಷದ ಅಧ್ಯಕ್ಷರು, ಮಾಜಿ ಪ್ರಧಾನಮಂತ್ರಿಯ ಮಗ, ಎನ್ಡಿಎ ಮೈತ್ರಿಕೂಟದ ಮಂಡ್ಯ ಅಭ್ಯರ್ಥಿ ಕುಮಾರಸ್ವಾಮಿ ಅವರು, "ನಮ್ಮ ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ" ಎಂದು ಮಹಿಳೆಯರ ಬಗ್ಗೆ ಬಹಳ ಕೀಳಾಗಿ ಮಾತನಾಡಿದ್ದಾರೆ. ತಾಯಿ ಇಲ್ಲದಿದ್ದರೆ ನಮಗೆ ಬದುಕು ಎಲ್ಲಿದೆ? ಆದರೆ ಈ ಹೇಳಿಕೆ ಮೂಲಕ ಕುಮಾರಸ್ವಾಮಿ ಅವರು ಆ ತಾಯಂದಿರಿಗೆ ಅಪಮಾನ ಮಾಡಿದ್ದಾರೆ. ರಾಜ್ಯದ ಮಹಿಳೆಯರು ಸ್ವಾಭಿಮಾನಿಗಳು. ನನಗೆ ಕರೆ ಮಾಡಿ ದಂಗೆ ಏಳುವ ಬಗ್ಗೆ ಮಾತನಾಡುತ್ತಿದ್ದಾರೆ. ಈ ತಾಯಂದಿರ ಹೋರಾಟಕ್ಕೆ ನಾವು ಅಡ್ಡಿ ಮಾಡುವುದಿಲ್ಲ. ಆದರೆ ನಿಮ್ಮ ಹೋರಾಟ ಕಾನೂನಿನ ಚೌಕಟ್ಟಿನಲ್ಲಿರಲಿ ಎಂದು ಮನವಿ ಮಾಡುತ್ತೇನೆ ಎಂದರು.

ನಮ್ಮ ಗ್ಯಾರಂಟಿ ಯೋಜನೆಗಳಿಂದ ಪ್ರತಿ ತಿಂಗಳು ಸುಮಾರು 4-5 ಸಾವಿರ ಉಳಿತಾಯವಾಗುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಗಳ ಪ್ರತಿಫಲವಾಗಿ ನಾವು ಓದಿ ಹೆಚ್ಚಿನ ಅಂಕ ಗಳಿಸಿದ್ದೇವೆ ಎಂದು ಪಿಯುಸಿ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳಿಂದ ಉಳಿತಾಯದ ಹಣದಲ್ಲಿ ಮಹಿಳೆಯರು ರೆಫ್ರೀಜರೇಟರ್, ಟಿವಿ, ಮಕ್ಕಳಿಗೆ ಲ್ಯಾಪ್ ಟಾಪ್, ಔಷಧಿಗಳನ್ನು ಖರೀದಿಸಿದ್ದಾರೆ. ಈ ಹಣದಲ್ಲಿ ಮಹಿಳೆಯರು ತಮ್ಮ ಮಕ್ಕಳ ಭವಿಷ್ಯ ರೂಪಿಸುತ್ತಿದ್ದಾರೆ. ಇಂತಹ ಮಹಿಳೆಯರನ್ನು ದಾರಿ ತಪ್ಪುತ್ತಿದ್ದಾರೆ ಎಂದು ಹೇಳುವ ಮೂಲಕ ಇಡೀ ಮಹಿಳಾ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಾವು ಈ ದೇಶವನ್ನು ಭಾರತ ಮಾತೆ ಎನ್ನುತ್ತೇವೆ, ನಮ್ಮ ನಾಡ ದೇವತೆ ಚಾಮುಂಡೇಶ್ವರಿ. ನಾವು ನಮ್ಮ ಗ್ಯಾರಂಟಿ ಯೋಜನೆಯ ಕಾರ್ಡ್ ಅನ್ನು ತಾಯಿ ಚಾಮುಂಡೇಶ್ವರಿ ಪಾದಕ್ಕಿಟ್ಟು ಪೂಜೆ ಮಾಡಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಶಕ್ತಿ ಯೋಜನೆ ಮೂಲಕ ಮಹಿಳೆಯರು ಕೆಲಸಕ್ಕೆ, ದೇವಾಲಯಗಳಿಗೆ, ತಮ್ಮ ತವರು ಮನೆಗೆ, ಸಹೋದರರ ಮನೆಗೆ ಹೋಗುತ್ತಿದ್ದಾರೆ. ಆದರೆ ಇಂತಹ ತಾಯಂದಿರ ಪ್ರಯಾಣದ ಬಗ್ಗೆ ಈ ರೀತಿ ಹೇಳಿರುವುದಕ್ಕೆ ಮಾನ್ಯ ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಸಚಿವೆಯರು ಉತ್ತರಿಸಬೇಕು ಎಂದು ಒತ್ತಾಯಿಸಿದರು.

ಬಜೆಟ್ ಪುಸ್ತಕವನ್ನೇ ಪ್ರಣಾಳಿಕೆ ಮಾಡಿದ್ದಾರೆ

 “ಬಿಜೆಪಿ ಪ್ರಣಾಳಿಕೆಯಲ್ಲಿ ಏನಿದೆ? ಅವರು ತಮ್ಮ ಬಜೆಟ್ ಪುಸ್ತಕವನ್ನೇ ಪ್ರಣಾಳಿಕೆ ಮಾಡಿದ್ದಾರೆ. ಅದರ ಹೊರತಾಗಿ ಬೇರೆ ಏನೂ ಇಲ್ಲ. ಅವರ ಪ್ರಣಾಳಿಕೆಯಲ್ಲಿ ನಮ್ಮಂತೆ ಯಾವುದೇ ಗ್ಯಾರಂಟಿ ಕೊಟ್ಟಿಲ್ಲ” ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News