ರಾಜ್ಯದಲ್ಲೇ ವಿನೂತನ ಪ್ರಯತ್ನ : ‘ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ’ ಉದ್ಘಾಟನೆ

Update: 2025-01-27 23:56 IST
ರಾಜ್ಯದಲ್ಲೇ ವಿನೂತನ ಪ್ರಯತ್ನ : ‘ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ’ ಉದ್ಘಾಟನೆ
  • whatsapp icon

ಮಡಿಕೇರಿ: ಸಾರ್ವಜನಿಕ ಶಾಂತಿ ಸುವ್ಯವಸ್ಥೆಗಳ ಕಾರ್ಯದಲ್ಲಿ ಸದಾ ನಿರತರಾಗಿರುವ ಪೊಲೀಸ್ ಸಿಬ್ಬಂದಿಗಳಲ್ಲಿ ಸುಪ್ತವಾಗಿ ಅಡಗಿರುವ ಕಲಾ ಪ್ರತಿಭೆಯನ್ನು ಹೊರ ತರುವ ನಿಟ್ಟಿನಲ್ಲಿ ರಾಜ್ಯದಲ್ಲೆ ಪ್ರಥಮ ಪ್ರಯೋಗವೆಂಬಂತೆ ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಿಂದ ವಿನೂತನವಾಗಿ ಆರಂಭಿಸಿರುವ ‘ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ’ಯನ್ನು ವರ್ಣರಂಜಿತ ಸಮಾರಂಭದಲ್ಲಿ ಉದ್ಘಾಟಿಸಲಾಯಿತು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ರವಿವಾರ ರಾತ್ರಿ ಆಯೋಜಿತ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಪೊಲೀಸ್ ಸಾಂಸ್ಕೃತಿಕ ವೇದಿಕೆಯ ಮಹಾ ಪೋಷಕರಾದ ಕೆ.ರಾಮರಾಜನ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಪೊಲೀಸ್ ಇಲಾಖೆಯಲ್ಲಿ ಇರುವ ಪ್ರತಿಯೊಬ್ಬರು ಸದಾ ಒತ್ತಡದ ನಡುವೆ ಕಾರ್ಯನಿರ್ವಹಣೆ ಮಾಡುವುದು ಅನಿವಾರ್ಯ. ಪ್ರತಿಯೊಬ್ಬರ ಒತ್ತಡಗಳನ್ನು ಕಳೆದು, ಅವರಲ್ಲಿ ಸುಪ್ತವಾಗಿರುವ ಕಲಾ ಪ್ರತಿಭೆಯನ್ನು ಹೊರ ತರುವ ನಿಟ್ಟಿನಲ್ಲಿ ಪೊಲೀಸ್ ಸಾಂಸ್ಕೃತಿಕ ವೇದಿಕೆಯನ್ನು ಆರಂಭಿಸಲಾಗಿದ್ದು, ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವಂತಾಗಬೇಕು ಎಂದರು.

ಪ್ರತಿಯೊಬ್ಬರಲ್ಲೂ ವಿಶಿಷ್ಟವಾದ ಕಲಾ ಪ್ರತಿಭೆ ಅಡಗಿರುತ್ತದೆ ಮತ್ತು ಎಲ್ಲರಿಗೂ ಅವರದೇ ಆದ ವೈಯಕ್ತಿಕ ಬದುಕು ಎಂಬುದಿರುತ್ತದೆ. ಇದನ್ನು ಗಮನಿಸಿ, ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಕಲಾ ಚಟುವಟಿಕೆಗಳಿಗೆ ಒತ್ತು ನೀಡಲು ವೇದಿಕೆಯನ್ನು ಹುಟ್ಟು ಹಾಕಲಾಗಿದ್ದು, ಇದರ ಮುಖೇನ ಪೊಲೀಸ್ ಸಿಬ್ಬಂದಿಗಳು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ ಇಲಾಖೆಯ ಗೌರವವನ್ನು ಹೆಚ್ಚಿಸುವಂತೆ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಕ್ತಿ ಪತ್ರಿಕೆಯ ಸಂಪಾದಕರಾದ ಜಿ.ಚಿದ್ವಿಲಾಸ್ ಮಾತನಾಡಿ, ಸಂಸ್ಕಾರ, ಸಂಸ್ಕೃತಿ, ಶಿಸ್ತು ಇರುವ ಮನೆಗಳು ಸುಂದರವಾಗಿರುತ್ತವೆ. ಅಂತಹ ಎಲ್ಲಾ ಅಂಶಗಳನ್ನು ಹೊಂದಿರುವ ಮನೆಯೇ ಕೊಡಗು ಪೊಲೀಸ್ ಇಲಾಖೆಯೆಂದು ಬಣ್ಣಿಸಿ, ರಾಜ್ಯದಲ್ಲೆ ಮೊಟ್ಟ ಮೊದಲ ಬಾರಿಗೆ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಸಾಂಸ್ಕೃತಿಕ ವೇದಿಕೆಯನ್ನು ಹಟ್ಟು ಹಾಕಿರುವುದು ಅಭಿಮಾನದ ವಿಚಾರವೆಂದರು.

ಬುಹುಭಾಷಾ ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, ಸಮಾಜದ ಶಾಂತಿ ಸುವ್ಯವಸ್ಥೆಗಳನ್ನು ಕಾಯುವಲ್ಲಿ ಪ್ರಮುಖ ಪಾತ್ರ ವಹಿಸುವ ಪೊಲೀಸರು ಸೂಪರ್ ಹೀರೋಗಳೆ ಆಗಿದ್ದಾರೆ. ಕೊಡಗು ಪೊಲೀಸರು ಮಾದಕ ದ್ರವ್ಯ ದಂಧೆಯನ್ನು ಹತ್ತಿಕ್ಕುವ ನಿಟ್ಟಿನ ಕಾರ್ಯಾಚರಣೆ ಸೇರಿದಂತೆ ವಿವಿಧ ದುಷ್ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತೋರಿರುವ ಕರ್ತವ್ಯನಿಷ್ಟೆ ನಿಜಕ್ಕೂ ಶ್ಲಾಘನೀಯವಾದುದೆಂದು ಬಣ್ಣಿಸಿದರು.

ಹೆಚ್ಚುವರಿ ಪೊಲಿಸ್ ವರಿಷ್ಠಾಧಿಕಾರಿಗಳು ಹಾಗೂ ವೇದಿಕೆಯ ಅಧ್ಯಕ್ಷರಾದ ಕೆ.ಸ್.ಸುಂದರರಾಜ್ ಮಾತನಾಡಿ, ಜಿಲ್ಲಾ ಪೊಲೀಸ್ ಇಲಾಖಾ ಸಿಬ್ಬಂದಿಗಳ ಕರ್ತವ್ಯಪರತೆಯಿಂದ ಸಮಾಜ ಘಾತುಕ ಶಕ್ತಿಗಳನ್ನು ಹತ್ತಿಕ್ಕುವ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಇಂತಹ ಸಂದರ್ಭ ಇಲಾಖಾ ಸಿಬ್ಬಂದಿಗಳಲ್ಲಿನ ಪ್ರತಿಭಾ ಅನಾವರಣಕ್ಕೊಂದು ವೇದಿಕೆಯ ಅಗತ್ಯತೆ ಇತ್ತು, ಇದೀಗ ಅದನ್ನು ಕಾರ್ಯರೂಪಕ್ಕೆ ತಂದಿರುವುದಾಗಿ ಹೇಳಿದರು.

ನಟಿ ತೇಜಸ್ವಿನಿ, ಸರಿಗಮಪ ರಿಯಾಲಿಟಿ ಶೋನ ಸ್ಪರ್ಧೆಯ ಮುಖ್ಯಸ್ಥ ಸಚಿನ್ ಪ್ರಕಾಶ್ ಕುಂದನ ಕೋಡಿ, ಸಂಯುಕ್ತ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಕೆ.ಕೆ.ನೌಶಾದ್, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೇಶವ ಕನಿಲ ಮೊದಲಾದವರು ಮಾತನಾಡಿದರು. ಮಡಿಕೇರಿ ನಗರದ ವೃತ್ತ ನಿರೀಕ್ಷಕರು ಹಾಗೂ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪಿ.ಕೆ.ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.

ಗಮನ ಸೆಳೆದ ಸಂಗೀತ ರಸ ಸಂಜೆ- ವೇದಿಕೆ ಕಾರ್ಯಕ್ರಮಗಳ ಬಳಿಕ ಸರಿಗಮಪ ರಿಯಾಲಿಟಿ ಶೋ ವಿಜೇತರಾದ ಚನ್ನಪ್ಪ ಹುದ್ದರ್, ಕೊಡಗಿನ ಪ್ರಗತಿ ಬಡಿಗೇರ್, ಪೊಲೀಸ್ ಸಿಬ್ಬಂದಿ ಸುಬ್ರಹ್ಮಣ್ಯ, ಬಾಳೆಲೆಯ ಅನ್ವಿತ್ ಕುಮಾರ್, ಜಿಲ್ಲೆಯವರಾದ ಪಂಚಮ್ ತ್ಯಾಗರಾಜ್, ಬುಟ್ಟಿಯಂಡ ಲಿಖಿತ, ಪೊಲೀಸ್ ಸಾಂಸ್ಕೃತಿಕ ವೇದಿಕೆಯ ಗಾಯಕರು ನಡೆಸಿಕೊಟ್ಟ ಸಂಗೀತ ರಸ ಸಂಜೆ ಗಮನ ಸೆಳೆಯಿತು.

ಸನ್ಮಾನ- ವೇದಿಕೆ ನಿರ್ಮಾಣಕ್ಕೆ ಕಾರಣರಾದ ಡಿವೈಎಸ್‍ಪಿ ಮಹೇಶ್ ಕುಮಾರ್, ಛದ್ಮವೇಷ ಕಲಾವಿದರಾದ ನಿವೃತ್ತ ಎಎಸ್‍ಐ ಪಾರ್ಥ, ಸಿನಿಮಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಇಲಾಖೆಯ ನಿಸ್ತಂತು ಘಟಕದ ಹೆಡ್ ಕಾನ್ಸ್‍ಟೇಬಲ್ ಈರಮಂಡ ವಿಜಯ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೃತ್ತ ನಿರೀಕ್ಷಕ ಪಿ.ಕೆ. ರಾಜು ಸ್ವಾಗತಿಸಿ, ಚನ್ನನಾಯಕ ವಂದಿಸಿದರು. 






 


 


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News