ಯುವ ಕಾಂಗ್ರೆಸ್ ಆಂತರಿಕ ಚುನಾವಣಾ ಫಲಿತಾಂಶ ಪ್ರಕಟ

ಹಕೀಂ ಸುಂಟಿಕೊಪ್ಪ \ ಜಮ್ಮಡ ಸೋಮಣ್ಣ
ಮಡಿಕೇರಿ, ಫೆ.8: 2024ರ ಆಗಸ್ಟ್ 20ರಿಂದ ಸೆಪ್ಟಂಬರ್ 22ರವರೆಗೆ ಐವೈಸಿ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ನಡೆದ ಯುವ ಕಾಂಗ್ರೆಸ್ ಆಂತರಿಕ ಚುನಾವಣಾ ಫಲಿತಾಂಶ ಫೆ.7ರ ಸಂಜೆ ಪ್ರಕಟಗೊಂಡಿದ್ದು ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜಮ್ಮಡ ಸೋಮಣ್ಣ 7,544 ಮತಗಳನ್ನು ಪಡೆಯುವುದರ ಮೂಲಕ 3,031 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಪ್ರತಿಸ್ಪರ್ಧಿ ಮೈಸಿ ಕತ್ತಣಿರ 4,513 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ಒಂದು ತಿಂಗಳ ಕಾಲ ನಡೆದ ಯುವ ಕಾಂಗ್ರೆಸ್ ಆಂತರಿಕ ಚುನಾವಣೆ ಕೊಡಗು ಜಿಲ್ಲೆಯಲ್ಲಿ ಜಿದ್ದಾಜಿದ್ದಿನ ಅಖಾಡಕ್ಕೆ ವೇದಿಕೆಯಾಗಿತ್ತು.
ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಏಳು ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ ಜಮ್ಮಡ ಸೋಮಣ್ಣ ಮತ್ತು ಮೈಸಿ ಕತ್ತಣಿರ ನಡುವೆ ಪೈಪೋಟಿ ಏರ್ಪಟ್ಟಿತು.
ಇದೀಗ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡು ನಾಲ್ಕು ತಿಂಗಳ ಬಳಿಕ ಫಲಿತಾಂಶ ಪ್ರಕಟಗೊಂಡಿದ್ದು ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಜಮ್ಮಡ ಸೋಮಣ್ಣ ಅವರ ಪಾಲಾಗಿದೆ.
ಸತತ ಎರಡನೇ ಬಾರಿ ಯುವ ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮೈಸಿ ಕತ್ತಣಿರ ಅವರಿಗೆ ಮತ್ತೊಮ್ಮೆ ಸೋಲು ಕಹಿ ಉಂಟಾಗಿದೆ.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದ ಅಭ್ಯರ್ಥಿಗೆ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನ ದೊರೆಯಲಿದೆ.
ತೃತೀಯ ಸ್ಥಾನ ಪಡೆದಿರುವ ಮೈಕಲ್ ಮಾರ್ಷಲ್ ಅವರಿಗೆ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಸ್ಥಾನದ ಭಾಗ್ಯ ಒಲಿದಿದೆ.
ಪ್ರತಿಷ್ಠೆಯ ಕಣದಲ್ಲಿ ಗೆದ್ದು ಬೀಗಿದ ಹಕೀಂ ಸುಂಟಿಕೊಪ್ಪ
ಯುವ ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಜಿದ್ದಾಜಿದ್ದಿನ ಫೈಟ್ ನಡೆದಿತ್ತು.
ಇಬ್ಬರು ಪ್ರಮುಖ ಅಭ್ಯರ್ಥಿಗಳು ಸುಂಟಿಕೊಪ್ಪ ನಿವಾಸಿಗಳಾಗಿದ್ದರಿಂದ ಚುನಾವಣೆ ಮತ್ತಷ್ಟು ರಂಗೇರುವಂತೆ ಮಾಡಿತ್ತು.
ಜಿಪಂ ಮಾಜಿ ಸದಸ್ಯ ಪಿ.ಎಂ. ಲತೀಫ್ ಸುಂಟಿಕೊಪ್ಪ ಅವರ ಮಗ ಮುಹಮ್ಮದ್ ಹರ್ಷದ್ ಪಿ.ಎಲ್. ಹಾಗೂ ಅಬ್ದುಲ್ ಹಕೀಂ ನಡುವಿನ ಫೈಟ್‌ನಲ್ಲಿ ಅಬ್ದುಲ್ ಹಕೀಂ 4,830 ಮತಗಳನ್ನು ಪಡೆದು ಪ್ರತಿಷ್ಠೆಯ ಕಣದಲ್ಲಿ ಗೆದ್ದು ಬೀಗಿದ್ದಾರೆ.
ಮುಹಮ್ಮದ್ ಹರ್ಷದ್ 4,697 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ.
ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಒಟ್ಟು ಐದು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸೋಲು ಕಂಡ ಅಭ್ಯರ್ಥಿಗಳಿಗೂ ಪ್ರಧಾನ ಕಾರ್ಯದರ್ಶಿ ಹುದ್ದೆ ದೊರೆತಿರುವುದು ವಿಶೇಷ. ಪ್ರಥಮ ಸ್ಥಾನ ಪಡೆದ ಅಬ್ದುಲ್ ಹಕೀಂ 133 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.