ರಾಜ್ಯದ ಎಲ್ಲಾ ಜಿಲ್ಲೆಗಳ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ದಿ ನಿಧಿಗೆ ತಲಾ 10 ಲಕ್ಷ ರೂ. ನೀಡಲು ಚಿಂತನೆ : ಕೆ.ವಿ.ಪ್ರಭಾಕರ್
ಕೋಲಾರ : ರಾಜ್ಯ ಸರಕಾರದ ಮುಂದಿನ ಬಜೆಟ್‌ನಲ್ಲಿ ಎಲ್ಲಾ ಜಿಲ್ಲೆಗಳ ಕಾರ್ಯನಿರತ ಪತ್ರಕರ್ತರ ಸಂಘಗಳ ಕ್ಷೇಮಾಭಿವೃದ್ದಿ ನಿಧಿಗೆ ತಲಾ 10 ಲಕ್ಷ ರೂ. ನೀಡಲು ಕ್ರಮ ವಹಿಸುವುದಾಗಿ ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯದರ್ಶಿ ಕೆ.ವಿ.ಪ್ರಭಾಕರ್ ಹೇಳಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ತುಮಕೂರಿನಲ್ಲಿ ನಡೆದ ಪತ್ರಕರ್ತರ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿ ಜಿಲ್ಲೆಯ ಘನತೆ ಹೆಚ್ಚಿಸಿದ ಪತ್ರಕರ್ತರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಬ್ಬಡ್ಡಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಜಿಲ್ಲಾ ತಂಡಕ್ಕೆ ವೈಯಕ್ತಿಕವಾಗಿ ಇಪ್ಪತ್ತೈದು ಸಾವಿರ ರೂ. ಬಹುಮಾನ ಘೋಷಿಸಿ ಮಾತನಾಡಿದರು.
ರಾಜ್ಯದಲ್ಲಿ ಕೋಲಾರ ಜಿಲ್ಲಾ ಸಂಘವು ಮಾದರಿಯಾಗಿದೆ. ಪ್ರತಿಯೊಂದು ಚಟುವಟಿಕೆಗಳನ್ನು ಸಂಘವು ಯಶಸ್ವಿಯಾಗಿ ಮಾಡಿಕೊಂಡು ಬಂದಿದೆ ಎಂದು ಅಭಿನಂದಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಕೋಲಾರ ಪತ್ರಕರ್ತರ ಸಂಘಕ್ಕೆ ತನ್ನದೇ ಆದ ಬ್ರ್ಯಾಂಡ್ ಇದೆ. ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ಇರುತ್ತದೆ, ಸೋತಾಗಲೂ ಬೆನ್ನು ತಟ್ಟುವ ಮೂಲಕ ಸಂಘವು ಹುರಿದುಂಬಿಸುತ್ತದೆ ಎಂದು ಹೇಳಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಕೋಲಾರಕ್ಕೆ ಕ್ರೀಡೆಗಳಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ, ಅದು ಹಿಂದಿನಿಂದಲೂ ಬಂದಿದೆ, ಉತ್ತಮ ಕ್ರೀಡಾಪಟುಗಳು ನಮ್ಮಲ್ಲಿದ್ದಾರೆ ಆತ್ಮಸ್ಥೈರ್ಯದಿಂದ ಗೆದ್ದು ಬರಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ಕೋಲಾರದವರು ಕ್ರೀಡಾಕೂಟದ ಹೆಸರಲ್ಲಿ ಮೈದಾನಕ್ಕೆ ಇಳಿದರೆ ಬರಿಗೈಯಲ್ಲಿ ಬರಲ್ಲ ಎಂಬುದು ಉದಾಹರಣೆ ಸಹಿತ ನಮ್ಮ ಕಣ್ಣ ಮುಂದಿದೆ ಎಂದರು.
ಪತ್ರಕರ್ತರ ಸಂಘದ ಜಿಲ್ಲಾ ಖಜಾಂಚಿ ಎ.ಜಿ.ಸುರೇಶ್ಕುಮಾರ್, ಹಿರಿಯ ಪತ್ರಕರ್ತರಾದ ರಾಜೇಂದ್ರಸಿಂಹ, ಮಾಮಿ ಪ್ರಕಾಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್.ರವಿಕುಮಾರ್, ಮದನ್ ಕುಮಾರ್, ಕಿರಣ್ ಕುಮಾರ್, ನಾಗರಾಜ್ , ಮಂಜುನಾಥ್, ಸಿ.ಅಮರೇಶ್, ಗಂಗರಾಜು, ಗಂಗಾಧರ್ ಪುರುಷೋತ್ತಮ ಶ್ರೀಕಾಂತ್, ವಿನೋದ್, ಸತೀಶ್, ವಿಜಯಕುಮಾರ್, ಸಮೀರ್, ಮಾಮಿ ಪ್ರಕಾಶ್, ಗೋಪಿ, ಶ್ರೀನಿವಾಸ್ ಮತ್ತಿತರರಿದ್ದರು.