ʼನಂಬಿಕೆ ದ್ರೋಹದಿಂದ ಸೋಲುಂಟಾಯಿತುʼ : ಚುನಾವಣಾ ರಾಜಕಾರಣದಿಂದ ನಿವೃತ್ತಿ ಸುಳಿವು ನೀಡಿದ ರಮೇಶ್ ಕುಮಾರ್
ಕೋಲಾರ : ಕಳೆದ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ತೆರೆಮರೆಗೆ ಸರಿದಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಇಂದು ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ತಮ್ಮ ಚುನಾವಣೆಯ ಸೋಲಿನ ಬಗ್ಗೆ ಸಾರ್ವಜನಿಕವಾಗಿ ನೋವಿನಿಂದ ಮಾತನಾಡಿದ್ದಾರೆ.
ಕೋಲಾರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಜನ್ನಘಟ್ಟ ವೆಂಕಟಮುನಿಯಪ್ಪ ಒಂದನೇ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಒಂದೂವರೆ ವರ್ಷದಿಂದ ನಾನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಮತ್ತೆ ಚುನಾವಣೆಗೆ ನಿಲ್ಲುವ ಆಸೆ ಇದ್ದಿದ್ದರೆ ಬಿಳಿ ಶುಭ್ರ ಬಟ್ಟೆ ಹಾಕಿಕೊಂಡು ಮದುವೆ, ಮುಂಜಿ, ರಥೋತ್ಸವ ಅಂಥ ಓಡಾಡಬಹುದಿತ್ತು" ಎಂದು ಮಾಜಿ ಸಚಿವ ರಮೇಶ್ ಕುಮಾರ್ ಹೇಳಿದರು.
‘ಈಗ ಚುನಾವಣೆ ಎಂದರೆ ಚಳಿ, ಜ್ವರ, ವಾಂತಿ, ಭೇದಿ ಬರುತ್ತದೆ. ಗ್ರಾಮ ಪಂಚಾಯಿತಿ ಚುನಾವಣೆಗೂ ಶ್ರೀಮಂತರು, ಬಂಡವಾಳಶಾಹಿಗಳು, ರಿಯಲ್ ಎಸ್ಟೇಟ್, ಶಿಕ್ಷಣ ಸಂಸ್ಥೆಯವರು ಬಂದು ಬಂಡವಾಳ ಹೂಡಿ ಸ್ಪರ್ಧಿಸುವ ಕಾಲ ಬಂದಿದೆ. ಹಾಗೆಯೇ ಯಾರೂ ಲಾಭವಿಲ್ಲದೆ ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿದರು.
‘ಜೀವನದಲ್ಲಿ ಸೋತಿದ್ದೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದಕ್ಕೆ ಬೇಸರ ಅಲ್ಲ. ನಂಬಿಕೆ ದ್ರೋಹದಿಂದ ಸೋಲುಂಟಾಯಿತು. ಈ ಹಿಂದೆ ನಾಲ್ಕು ಬಾರಿ ಸೋತಿದ್ದೆ, ಇದು ಐದನೇ ಸೋಲು ಅಷ್ಟೆ. ಆದರೆ, ನನ್ನ ಜೊತೆಯಲ್ಲೇ ಇದ್ದು, ಭುಜದ ಮೇಲೆ ಕೈಹಾಕಿ ಬೆನ್ನಿಗೆ ಚೂರಿ ಹಾಕಿದರು, ಊಟಕ್ಕೆ ಕರೆದು ವಿಷ ಹಾಕಿದರು ಎಂದು ಬೇಸರ ಹೊರಹಾಕಿದ್ದಾರೆ.