ಮಾಧ್ಯಮವು ದೇಶ,‌ ಸಮಾಜದ ಕಣ್ಣು ತೆರೆಸುವ ಕೆಲಸ‌ ಮಾಡಬೇಕು‌ : ಪ್ರೊ.ಬಿ.ಡಿ.ಕುಂಬಾರ್

Update: 2024-12-18 07:26 GMT

ದಾವಣಗೆರೆ: ʼಬದಲಾವಣೆ ಜಗದ ನಿಯಮ. ಬದಲಾವಣೆ ‌ಮಾಡಿಕೊಳ್ಳದಿದ್ದರೆ ದೇಶ,‌ ಸಮಾಜ ಹಿಂದುಳಿಯುತ್ತದೆ‌. ಮಾಧ್ಯಮವು ದೇಶ,‌ ಸಮಾಜದ ಕಣ್ಣು ತೆರೆಸುವ ಕೆಲಸ‌ ಮಾಡಬೇಕು‌ʼ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಬಿ.ಡಿ.ಕುಂಬಾರ್ ತಿಳಿಸಿದರು.

ಯುನಿಸೆಫ್ ಸಹಯೋಗದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಹಾಗೂ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ʼಮಕ್ಕಳ ಹಕ್ಕುಗಳು, ಆರೋಗ್ಯ ಹಾಗೂ ರಕ್ಷಣೆʼ ಕುರಿತ ಎರಡು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

'ವಿಶೇಷವಾಗಿ ಮಕ್ಕಳಿಗಾಗಿ ಇರುವ ಕಾರ್ಯಾಗಾರವಿದು. ಮಕ್ಕಳು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಮಕ್ಕಳ ಹಕ್ಕು ರಕ್ಷಣೆ ಹಾಗೂ ಆರೋಗ್ಯ ‌ವಿಚಾರಕ್ಕೆ ಒತ್ತು ನೀಡಬೇಕಾದ ಅನಿವಾರ್ಯ ನಿರ್ಮಾಣವಾಗಿದೆ' ಎಂದರು.

'ಮಕ್ಕಳ ಹಕ್ಕುಗಳ ರಕ್ಷಣೆ ಬರೀ ಯುನಿಸೆಫ್ ಜವಾಬ್ದಾರಿ ಅಲ್ಲ.‌ ನಮ್ಮೆಲ್ಲರ ಜಬಾವ್ದಾರಿ‌ ಆಗಿದೆ. ಮಕ್ಕಳ‌ ಮೇಲೆ‌ ಮಾನಸಿಕ‌ ಹಾಗೂ ದೈಹಿಕ ದೌರ್ಜನ್ಯ ಪ್ರಕರಣ‌ ಹೆಚ್ಚುತ್ತಿವೆ. ಹಿಂದೆ ‌ಪತ್ರಿಕೆಗಳಲ್ಲಿ ಮಕ್ಕಳಿಗೆ ಪ್ರತ್ಯೇಕ ಪುಟ ಇರುತಿತ್ತು. ಈಗ ಮಕ್ಕಳು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಇದೆ. ಪೋಕ್ಸೊ ಪ್ರಕರಣ‌‌ ಹೆಚ್ಚುತ್ತಿವೆ‌‌' ಎಂದು ವಿಷಾದ ವ್ಯಕ್ತಪಡಿಸಿದರು.

'ಬಡ‌ ಮಕ್ಕಳಿಗಾಗಿ ಯುನಿಸೆಫ್ ಉತ್ತಮ ಕೆಲಸ‌ ಮಾಡುತ್ತಿದೆ. ಲಿಂಗ ಸಮಾನತೆ ಕಾಯ್ದುಕೊಳ್ಳಲು‌ ವಿದೇಶಗಳಲ್ಲಿ ಪ್ರಯತ್ನ ನಡೆದಿದೆ. ಆದರೆ ಇಲ್ಲಿ ಹೆಣ್ಣು ಮಕ್ಕಳು ಭೂಷಣ‌ ಅಲ್ಲ ಎಂಬ ‌ಕುಹಕ ನಡೆಯುತ್ತಿದೆ. ಇದರಿಂದ ಲಿಂಗ ‌ಅಸಮಾನತೆ ಹೆಚ್ಚುತ್ತಿದೆ. ರೈತರಿಗೆ ಹೆಣ್ಣು ‌ಸಿಗದ ಪರಿಸ್ಥಿತಿ ನೆಲೆಸಿದೆ. ಅಸ್ವಸ್ಥತೆ ಸಮಾಜ ನಿರ್ಮಾಣ ‌ಮಾಡುತ್ತಿದ್ದೇವೆ' ಎಂದು ‌ನುಡಿದರು.

ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥೆ ಸ್ವಪ್ನಾ ನಾಯ್ಕ್ ಮಾತನಾಡಿ, 'ಕೋವಿಡ್ ಬಳಿಕ ಮಕ್ಕಳನ್ನು ಹೆಚ್ಚಾಗಿ ನಿರ್ಲಕ್ಷಿಲಾಗುತ್ತಿದೆ ಎಂಬುದು ಯುನೆಸ್ಕೋ ವಾದವಾಗಿದೆ. ಇದು ಮೂರನೇ ವಲಯ ‌ಮಟ್ಟದ ಕಾರ್ಯಕ್ರಮ ಆಗಿದೆ. ಪತ್ರಿಕೆಗಳಲ್ಲಿ ಮಕ್ಕಳಿಗೆ ಸಂಬಂಧಿಸಿದಂತೆ ವರದಿಗಾರಿಕೆ ನೆಗೆಟಿವ್ ಆಗಿದೆ. ಮಕ್ಕಳ ಮಾನಸಿಕ ಆರೋಗ್ಯದ ವಿಚಾರದ ಬಗ್ಗೆ ಅಧ್ಯಯನ ನಡೆಯಬೇಕಿದೆ. ಜೊತೆಗೆ ಮಕ್ಕಳು ಡಿಜಿಟಲ್‌ ಸಂಪರ್ಕದ ವಿಚಾರದ ಬಗ್ಗೆಯೂ ಚರ್ಚೆ ಆಗಬೇಕಿದೆ' ಎಂದರು.

'ಮಕ್ಕಳ ವಿಚಾರದಲ್ಲಿ ಪತ್ರಿಕೆಗಳಲ್ಲಿ ಸಂಪಾದಕೀಯ ಕೂಡ ಬರುತ್ತಿದೆ. ಮಕ್ಕಳ ವಿಚಾರವನ್ಜು ಗಂಭೀರವಾಗಿ ಪರಿಗಣಿಸಿದ್ದಾರೆ. ಅದು ಸಾಕಾಗುತ್ತಿಲ್ಲ. ಇನ್ನೂ ಹೆಚ್ಚಿನ ವಿಚಾರ ‌ಬರಬೇಕಿದೆ‌' ಎಂದು ಹೇಳಿದರು.

ಯುನಿಸೆಫ್ ಹೈದರಾಬಾದ್‌ನ ಪ್ರಸುನ್ ಸೇನ್ ಮಾತನಾಡಿ, ʼಸಾಂಕ್ರಾಮಿಕವಲ್ಲದ‌ ರೋಗಗಳು ಹೆಚ್ಚುತ್ತಿವೆ. ಶೇ.30ರಷ್ಟು ಮಕ್ಕಳು, ಯುವಕರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸ್ಪರ್ಧಾತ್ಮಕ ಯುಗದಲ್ಲಿ ಸಮತೋಲನ‌ ಕಾಯ್ದುಕೊಳ್ಳುವುದು ಕಷ್ಟವಾಗಿದೆ‌ʼ ಎಂದರು.

ದಾವಣಗೆರೆಯ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ್ ಕಣಸೋಗಿ ಮಾತನಾಡಿ, ʼನಮ್ಮ ವಿಶ್ವವಿದ್ಯಾಲಯಕ್ಕೆ ಲಭಿಸಿದ ಅತ್ಯುತ್ತಮ ಅವಕಾಶ ಇದು. ಕುಲಪತಿ ‌ಅದಕ್ಕೆ ಸ್ಪಂದಿಸಿ ಸಹಕಾರ‌ ನೀಡಿದ್ದಾರೆʼ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News