ಯತ್ನಾಳ್ ಹಿಂದೂ ಹುಲಿಯಲ್ಲ, ಹಿಂದೂ ಇಲಿ : ಮತ್ತೆ ಆಕ್ರೋಶ ವ್ಯಕ್ತಪಡಿಸಿದ ರೇಣುಕಾಚಾರ್ಯ

Update: 2024-11-29 11:20 GMT

ರೇಣುಕಾಚಾರ್ಯ/ಯತ್ನಾಳ್‌

ಕೋಲಾರ: ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ಇದೀಗ ಕೋಲಾರದ ಕುರುಡುಮಲೆ ದೇಗುಲಕ್ಕೆ ರೇಣುಕಾಚಾರ್ಯ, ಬಿ.ಸಿ‌.ಪಾಟೀಲ್, ಕಟ್ಟಾ ಸುಬ್ರಮಣ್ಯ ನಾಯ್ಡು ಭೇಟಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಾಯಕ ರೇಣುಕಾಚಾರ್ಯ ಅವರು, "ಯತ್ನಾಳ್ ಹಿಂದೂ ಹುಲಿಯಲ್ಲ, ಹಿಂದೂ ಇಲಿ. ಬಿಜೆಪಿಗೆ ಹೊರಗಿನ ದುಷ್ಟಶಕ್ತಿ ಕಾಂಗ್ರೆಸ್, ಒಳಗಿನ ದುಷ್ಟಶಕ್ತಿ ಪಕ್ಷ ವಿರೋಧಿಗಳು. ಕಾಂಗ್ರೆಸ್ ಮುಖವಾಣಿಯಂತೆ ಯತ್ನಾಳ್ ಕೆಲಸ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯಿಂದ ಸುಪಾರಿ ಪಡೆದುಕೊಂಡವರಂತೆ ಕೆಲಸ ಮಾಡುತ್ತಿದ್ದಾರೆ" ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

"ರಾಜ್ಯದಲ್ಲಿ ಸೈಕಲ್ ತುಳಿದು ಬಿಜೆಪಿ ಕಟ್ಟಿದ್ದು ಯಡಿಯೂರಪ್ಪ ಹಾಗೂ ಅನಂತ್ ಕುಮಾರ್, ಭಾರತೀಯ ಜನತಾ ಪಾರ್ಟಿ ಕಟ್ಟಿದವರ ವಿರುದ್ದ ಯತ್ನಾಳ್ ಹಗುರವಾಗಿ ಮಾತನಾಡಿದ್ದಾರೆ. ಯತ್ನಾಳ್‌ಗೆ ಯಾವುದೇ ರಾಷ್ಟ್ರೀಯ ನಾಯಕರ ಬೆಂಬಲ ಇಲ್ಲ" ಎಂದು ಹೇಳಿದರು.

"ಯತ್ನಾಳ್‌, ನೀನೊಬ್ಬ ಗೋಮುಖ ವ್ಯಾಘ್ರ, ನೀವು ಮುಖವಾಡ ಹಾಕಿಕೊಂಡಿದ್ದೀರಿ. ನೀನು ಪಕ್ಷದಿಂದ ಅಮಾನತ್ತಾಗಿದ್ದಾಗ ಇಪ್ತಿಯಾರ್ ಕೂಟ ಮಾಡಿದ್ದೆ. ನಿನಗೆ ಮಾನ ಮರ್ಯಾದೆ ಇದ್ದರೆ, ಬಾಯಿ ಮುಚ್ಚಿಕೊಂಡಿರಬೇಕು" ಎಂದು ಕಿಡಿಕಾರಿದರು.

ಯತ್ನಾಳ್ ಹುಚ್ಚರಂತೆ ಮಾತಾನಾಡುತ್ತಿದ್ದಾರೆ : ಬಿ.ಸಿ.ಪಾಟೀಲ್‌

"ನಮ್ಮಲ್ಲಿ ಪಕ್ಷದೊಳಗೇ ಇದ್ದು, ಚೂರಿ ಹಾಕುವವರು ಇದ್ದಾರೆ. ಬಿಜೆಪಿ ಶಾಲು ಹಾಕಿಕೊಂಡು, ಪಕ್ಷದ ಅಧ್ಯಕ್ಷರ ವಿರುದ್ಧವೇ ಮಾತನಾಡುತ್ತಾರೆ. ಬಿಜೆಪಿ ಹೈಕಮಾಂಡ್ ಸುಮ್ಮನಿಲ್ಲ, ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಉಪಚುನಾವಣೆ ಸೋಲಿಗೆ ವಿಜಯೇಂದ್ರ ಹೊಣೆ ಎಂದು ಹೇಳುತ್ತಿದ್ದಾರೆ. ಆದರೆ ಈ ರೀತಿ ಹೇಳುವುದು ಸರಿಯಲ್ಲ. ಸದ್ಯ ಯತ್ನಾಳ್ ಹುಚ್ಚರಂತೆ ಮಾತನಾಡುತ್ತಿದ್ದಾರೆ, ಅವರು ನೀಡುವ ಹೇಳಿಕೆ ಅವರಿಗೆ ಸೀಮಿತ" ಎಂದು ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News