ಕೋಲಾರ: ಸರಕಾರಿ ಪದವಿ ಕಾಲೇಜಿನ ಪರೀಕ್ಷಾ ಕೊಠಡಿ ಗೋಡೆಗಳೇ ವಿದ್ಯಾರ್ಥಿಗಳಿಗೆ 'ನಕಲು ಚೀಟಿ'!
ಕೋಲಾರ: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ (ಬಾಲಕರ ಕಾಲೇಜು) ಗೋಡೆಗಳು ಪದವಿ ಶಿಕ್ಷಣದ ಎಲ್ಲಾ ವಿಭಾಗದ ಸಿಲಬಸ್ ಗೆ ಸೇರಿದ ಪ್ರಶ್ನೆ ಮತ್ತು ಉತ್ತರಗಳಿಂದ ತುಂಬಿ ಹೋಗಿದೆ. ಗೋಡೆಗಳ ಮೇಲೆಲ್ಲ ಗಣಿತ ಮತ್ತು ವಿಜ್ಞಾನದ ಸೂತ್ರ, ಪ್ರಮೇಯಗಳನ್ನು ಶುದ್ಧವಾಗಿ ಕಾಣುವಂತೆ ಬರೆಯಲಾಗಿದೆ!
ಕೋಲಾರ ನಗರದ ಹೃದಯ ಭಾಗದಲ್ಲಿರುವ ಸರಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜು ಐತಿಹಾಸಿಕ ಹಿನ್ನೆಲೆ ಇರುವ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿತ್ತು. ಜಿಲ್ಲಾ ಕೇಂದ್ರದಲ್ಲಿ ದೊಡ್ಡ ಕಟ್ಟಡ ಇರುವ ಏಕೈಕ ಪ್ರಥಮ ದರ್ಜೆ ಕಾಲೇಜು ಇದಾಗಿದ್ದು, ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಪದವಿ ಪರೀಕ್ಷೆಗಳಿಗೆ ಇದು ಪರೀಕ್ಷಾ ಕೇಂದ್ರವಾಗಿದೆ. ಕೆಲವು ಖಾಸಗಿ ಕಾಲೇಜುಗಳಿಗೂ ಸಹ ಇದೇ ಪರೀಕ್ಷಾ ಕೇಂದ್ರವಾಗಿದೆ. ಆದರೆ ಇದೀಗ ಇಲ್ಲಿನ ಪರೀಕ್ಷಾ ಕೊಠಡಿಗಳ ಗೋಡೆಗಳೇ ವಿದ್ಯಾರ್ಥಿಗಳಿಗೆ ನಕಲು ಚೀಟಿಯಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪರೀಕ್ಷಾ ಕೊಠಡಿಗಳ ನಾಲ್ಕೂ ಗೋಡಗಳೂ ಬರವಣಿಗೆಗಳಿಂದ ಅಲಂಕಾರಗೊಂಡಂತಿದೆ. ಪದವಿ ಶಿಕ್ಷಣದ ಎಲ್ಲಾ ವಿಭಾಗದ ಸಿಲಬಸ್ ಗೆ ಸೇರಿದ ಪ್ರಶ್ನೆ ಮತ್ತು ಉತ್ತರಗಳು ಗೋಡೆಗಳ ಮೇಲೆ ಶುದ್ಧವಾಗಿ ಕಾಣುವಂತೆ ಬರೆಯಲಾಗಿದೆ. ಪರೀಕ್ಷೆಗಳು ಬರೆಯುವ ಯಾವುದೇ ವಿಭಾಗದ ವಿದ್ಯಾರ್ಥಿಗಳಿಗೆ ಉತ್ತರ ಗೊತ್ತಿಲ್ಲದಿದ್ದರೆ ಒಮ್ಮೆ ಗೋಡೆಯ ಮೇಲೆ ಕಣ್ಣಾಡಿಸಿದರೆ ಎಲ್ಲಾ ಉತ್ತರಗಳು ಸಿಗುತ್ತವೆ. ಇದರಿಂದ ಎಲ್ಲಾ ವಿದ್ಯಾರ್ಥಿಗಳು ಅರಾಮವಾಗಿ ಪರೀಕ್ಷೆ ಬರೆಯಲು ಸಾಧ್ಯವಾಗುತ್ತದೆ. ಇದೂ ಒಂದು ರೀತಿಯಲ್ಲಿ ಸಾಮೂಹಿಕ ನಕಲು ಕೇಂದ್ರದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಮುನ್ನ ಕೊಠಡಿಗಳಿಗೆ ಬಣ್ಣ ಬಳಿಯುವ ಕೆಲಸ ಸಹ ಮಾಡುವುದಿಲ್ಲ. ಇಡೀ ಕಾಲೇಜಿನ ಕಟ್ಟಡಗಳು ಬಣ್ಣ ಕಾಣದೆ ಹಾಳುಕೊಂಪೆಯಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಅತಿಥಿ ಉಪನ್ಯಾಸಕರೇ ತುಂಬಿರುವ ಈ ಕಾಲೇಜಿನಲ್ಲಿ ಗೋಡೆಯ ಮೇಲಿನ ಉತ್ತರಗಳನ್ನು ಮಾಸ್ ಕಾಪಿ ಮಾಡುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ.
ಕಾಲೇಜಿನಲ್ಲಿ ಸಿಬ್ಬಂದಿ ಕೊರತೆ ಇದೆ, ಡಿ ಗ್ರೂಪ್ ನೌಕರರು ಇಬ್ಬರೇ ಇದ್ದು ಅವರಿಗೂ ವಯಸ್ಸಾಗಿದೆ. ಕಸ ಗುಡಿಸುವ ಹಾಗೂ ವಿಲೇವಾರಿಗೆ ಕಷ್ಟವಾಗಿದೆ. ಇನ್ನೂ ಗೋಡೆಯ ಮೇಲಿನ ಬರಹದಲ್ಲಿರುವುದು ಹಳೆಯ ಸಿಲಬಸ್. ಇದರಿಂದ ವಿದ್ಯಾರ್ಥಿಗಳಿಗೆ ಉತ್ತರ ಬರೆಯಲು ಆಗುವುದಿಲ್ಲ. ಶೀಘ್ರದಲ್ಲೇ ಗೋಡೆಗಳಿಗೆ ಬಣ್ಣ ಬಳಿಯಲು ವ್ಯವಸ್ಥೆ ಮಾಡಲಾಗುವುದು.
- ಡಾ.ಎಸ್.ತ್ಯಾಗರಾಜ್, ಪ್ರಾಂಶುಪಾಲರು, ಸರಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜು. ಕೋಲಾರ
ಪರೀಕ್ಷೆ ಬರೆಯುವ ಕೊಠಡಿಗಳ ಗೋಡೆಗಳು ಶುದ್ಧವಾಗಿರಬೇಕು, ಪರೀಕ್ಷೆಗೆ ಮುಂಚಿತವಾಗಿ ಗೋಡೆಗಳಿಗೆ ಬಣ್ಣ ಬಳಿಯುವ ಕೆಲಸ ಕಾಲೇಜು ಆಡಳಿತ ಆದ್ಯತೆ ನೀಡಿ ಮಾಡಬೇಕು. ಬಾಲಕರ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರೀಕ್ಷೆ ನಡೆಯುವ ಕೊಠಡಿಗಳ ಗೋಡೆಗಳ ಮೇಲೆ ಉತ್ತರಗಳು ಸಿಗುತ್ತವೆ ಎಂದು ಈಗಾಗಲೇ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಕಾಲೇಜು ಪ್ರಾಂಶುಪಾಲರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲಾ ಕಾಲೇಜುಗಳು ಪರೀಕ್ಷೆಗೆ ಮುಂಚಿತವಾಗಿ ಗೋಡೆಗಳಿಗೆ ಬಣ್ಣ ಬಳಿಯುವ ಕೆಲಸ ಮಾಡಬೇಕು. ತಪ್ಪಿದರೆ ಆ ಕಾಲೇಜಿನ ಪರೀಕ್ಷಾ ಕೇಂದ್ರವನ್ನು ರದ್ದುಪಡಿಸಲಾಗುವುದು.
- ಪ್ರೊ..ತಿಪ್ಪೇಸ್ವಾಮಿ, ರಿಜಿಸ್ಟ್ರಾರ್, ಮೌಲ್ಯ ಮಾಪನ, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ