ಉತ್ತರ ಕರ್ನಾಟಕದ ಮಕ್ಕಳಿಗೆ ಅನುಕೂಲವಾಗುವಂತೆ ವಿಜ್ಞಾನ ಕೇಂದ್ರಗಳ ಅಭಿವೃದ್ಧಿ: ಸಚಿವ ಎನ್.ಎಸ್.ಭೋಸರಾಜು
ಕೊಪ್ಪಳ : ರಾಜ್ಯದಲ್ಲಿರುವ ಜಿಲ್ಲಾ ವಿಜ್ಞಾನ ಕೇಂದ್ರಗಳ ಅಭಿವೃದ್ಧಿಗೆ ಮನವಿಗಳು ಬರುತ್ತಿದ್ದು, ಅವುಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಭೋಸರಾಜು ಹೇಳಿದರು.
ಇಂದು ಕೊಪ್ಪಳನಗರದಲ್ಲಿರುವ ಉಪ- ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶೇ.50:50 ರ ಅನುದಾನದಲ್ಲಿ ಈಗಾಗಲೇ ರಾಯಚೂರು, ಯಾದಗಿರಿ ಮತ್ತು ಮಂಗಳೂರಿನಲ್ಲಿ ಒಳ್ಳೆಯ ವಿಜ್ಞಾನ ಕೇಂದ್ರಗಳನ್ನು ಮಾಡುತ್ತಿದ್ದೆವೆ. ಅದರಂತೆ ಉತ್ತರ ಕರ್ನಾಟಕದ ಜಿಲ್ಲೆಯ ಎಲ್ಲಾ ಕಡೆ ಪ್ರೌಢ ಶಾಲೆಯ ಮಕ್ಕಳಿಗೆ ಅನುಕೂಲವಾಗುವ ಮತ್ತು ಅವರಿಗೆ ವಿಜ್ಞಾನದ ಕುರಿತು ಮಾಹಿತಿ ನೀಡಲು ಈ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಅನುದಾನವನ್ನು ನೀಡಲಾಗುವುದು ಎಂದರು.
ಮೊಬೈಲ್ ವ್ಯಾನ್ ಗಳ ಮುಖಾಂತರ ಶಾಲೆಗಳಿಗೆ ತೆರಳಿ ವಿಜ್ಞಾನದ ಮಾಹಿತಿಯನ್ನು ಮಕ್ಕಳಿಗೆ ನೀಡಲಾಗುತ್ತದೆ. ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷರು ಜಿಲ್ಲಾಧಿಕಾರಿಗಳು ಆಗಿರುವುದರಿಂದ ಆಗಾಗ್ಗೆ ಸಭೆ ನಡೆಸಿ ವಿಜ್ಞಾನ ಕೇಂದ್ರಕ್ಕೆ ಬೇಕಾಗುವ ಸೌಲಭ್ಯಗಳನ್ನು ಒದಗಿಸಬೇಕು. ಇದಕ್ಕೆ ಆಯಾ ಜಿಲ್ಲೆಯ ಸಚಿವರು, ಸಂಸದರು, ಶಾಸಕರು ತಮ್ಮ ಸ್ಥಳೀಯ ಅನುದಾನದಲ್ಲಿ ನೆರವನ್ನು ನೀಡುವ ಮೂಲಕ ವಿಜ್ಞಾನ ಕೇಂದ್ರಗಳ ಅಭಿವೃದ್ಧಿಗೆ ಎಲ್ಲರೂ ಸಹಾಯ ಸಹಕಾರ ನೀಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ಸಂಸದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ನಗರಸಭೆ ಅಧ್ಯಕ್ಷರ ಅಮ್ಜದ್ ಪಟೇಲ್, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ, ಮಾಜಿ ಸಂಸದ ಸಂಗಣ್ಣ ಕರಡಿ, ಕೊಪ್ಪಳ ತಹಶೀಲ್ದಾರ ವಿಠಲ್ಲ ಚೌಗಲೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೆಶಕರ ಶ್ರೀಶೈಲ ಬಿರಾದಾರ ಸೇರಿದಂತೆ ಉಪ- ಪ್ರಾದೇಶಿಕ ವಿಜ್ಞಾನ ಕೇಂದ್ರದ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.