ಬಾಬರಿ ಮಸೀದಿ ಕೆಡವಿ ರಾಮ ಮಂದಿರ ನಿರ್ಮಾಣವಾದರೂ ಮುಸ್ಲಿಮರು ವಿರೋಧಿಸಿಲ್ಲ: ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ

Update: 2025-01-26 22:29 IST
ಬಾಬರಿ ಮಸೀದಿ ಕೆಡವಿ ರಾಮ ಮಂದಿರ ನಿರ್ಮಾಣವಾದರೂ ಮುಸ್ಲಿಮರು ವಿರೋಧಿಸಿಲ್ಲ: ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ
  • whatsapp icon

ಕೊಪ್ಪಳ: ಬಾಬರಿ ಮಸೀದಿ ಒಡೆದು ರಾಮ ಮಂದಿರ ನಿರ್ಮಾಣ ಮಾಡಿದರೂ, ಒಬ್ಬನೇ ಒಬ್ಬ ಮುಸ್ಲಿಮನೂ ಅದನ್ನು ವಿರೋಧಿಸಲಿಲ್ಲ. ಹಿಂದೂಗಳಿಗೆ ಹೋಲಿಕೆ ಮಾಡಿದರೆ ಮುಸ್ಲಿಮರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಅವರು ರವಿವಾರ ಕೊಪ್ಪಳ ನಗರಸಭೆ ವತಿಯಿಂದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ʼಪತ್ರಕರ್ತರು ಹಾಗೂ ಪೌರಸೇವಾ ನೌಕರ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಕ್ಕು-ಪತ್ರಗಳನ್ನು ವಿತರಣೆ ಕಾರ್ಯಕ್ರಮʼದಲ್ಲಿ ಮಾತನಾಡಿದರು.

ಮುಸ್ಲಿಮರು ನಮ್ಮ ದೇಶದವರೇ, ಅವರು ಮಂಗಳ ಗ್ರಹದಿಂದ ಬಂದವರಲ್ಲ. ಹಿಂದೂಗಳಿಗೆ ಹೋಲಿಕೆ ಮಾಡಿದರೆ ಮುಸ್ಲಿಮರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಬಾಬರಿ ಮಸೀದಿ ಒಡೆದು ರಾಮ ಮಂದಿರ ನಿರ್ಮಾಣ ಮಾಡಿದರೂ ಸಹ ಯಾರೂ ಕೂಡ ಅದನ್ನು ವಿರೋಧಿಸಲಿಲ್ಲ ಅವರನ್ನು ನಾನು ಪ್ರಶಂಶಿಸುವೆ ಎಂದು ಹೇಳಿದರು.

ವಸತಿ ಸಚಿವ ಜಮೀರ್ ಅಹ್ಮದ್ ಅವರಿಗೆ ಬಡವರ ಬಗ್ಗೆ ವಿಶೇಷ ಕಾಳಜಿ ಇದೆ. ಹೆಚ್ಚು ಸೈಟ್ಗಳನ್ನು ಬಡವರಿಗೆ ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. 30 ವರ್ಷಗಳ ಹಿಂದೆ ನಾನು ವಸತಿ ಸಚಿವನಾಗಿದ್ದಾಗ ಮನೆ ಇಲ್ಲದವರ ಸರ್ವೆ ಮಾಡಿಸಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಒಂದು ವರ್ಷಕ್ಕೆ 54 ಸಾವಿರ ಕೋಟಿ ರೂ. ಖರ್ಚಾಗುತ್ತಿದೆ ಎಂದರು.

ಶಾಲಾ-ಮಕ್ಕಳಿಗೆ ಪಠ್ಯ ಪುಸ್ತಕ, ಬಟ್ಟೆ, ಹಾಲು, ಶೂ, ಮೊಟ್ಟೆ, ಕಡ್ಲೆ ಚಿಕ್ಕಿ, ಬಾಳೆಹಣ್ಣು ವಿತರಣೆ ಹಾಗೂ ಅಂಗನವಾಡಿಗಳು ಸೇರಿದಂತೆ ಇವುಗಳಿಗೆಲ್ಲ 1 ಲಕ್ಷ 5 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ. ನಮಗೆ ಹಣದ ಯಾವುದೇ ಸಮಸ್ಯೆ ಇಲ್ಲ. ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಇಂದು ಜನಪರ ಕಾರ್ಯ ಯಾರು ಮಾಡದ್ದನ್ನು ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನೀಡಿದ್ದಾರೆ. ಅವರು ಬಡವರ ಪರ ಕಾಳಜಿ ಹೊಂದಿದ್ದಾರೆ. ಅವರು 5 ವರ್ಷ ಸಿಎಂ ಆಗಿರಬೇಕು, ಅವಧಿ ಪೂರ್ಣಗೊಳಿಸಬೇಕು. ಕೊಪ್ಪಳ ಜಿಲ್ಲೆಗೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಬೇಡಿಕೆಯಿದೆ. ಈ ಬಜೆಟ್ ನಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಮಂಜೂರು ಮಾಡಿಸುವ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News