ಕೊಪ್ಪಳ ನಗರಸಭೆ ಕಾಂಗ್ರೆಸ್‌ ತೆಕ್ಕೆಗೆ | ಅಧ್ಯಕ್ಷರಾಗಿ ಕಾಂಗ್ರೆಸ್‌ನ ಅಮ್ಜದ್ ಪಟೇಲ್, ಉಪಾಧ್ಯಕ್ಷರಾಗಿ ಅಶ್ವಿನಿ ಗದುಗಿನಮಠ ಆಯ್ಕೆ

Update: 2024-08-21 11:28 GMT

ಅಮ್ಜದ್ ಪಟೇಲ್/ಅಶ್ವಿನಿ ಗದುಗಿನಮಠ

ಕೊಪ್ಪಳ: ಕೊಪ್ಪಳ ನಗರಸಭೆಯ 14 ತಿಂಗಳ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಇಂದು (ಬುಧವಾರ) ಚುನಾವಣೆ ನಡೆದಿದೆ. ಕೊಪ್ಪಳ ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ಸಿನ ಅಮ್ಜದ್ ಪಟೇಲ್ ಗೆಲುವು ಸಾಧಿಸಿದ್ದಾರೆ.

ಕೊಪ್ಪಳ ನಗರಸಭೆಯಲ್ಲಿ ಒಟ್ಟು 31 ಸದಸ್ಯರ ಬಲವಿದ್ದು ಇದರಲ್ಲಿ ಇಬ್ಬರು ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನುಳಿದ 29 ಸದಸ್ಯರಲ್ಲಿ 23 ಸದಸ್ಯರು, ಶಾಸಕ ಮತ್ತು ಸಂಸದರ ಮತ ಸೇರಿ ಒಟ್ಟು 25 ಮತ ಕಾಂಗ್ರೆಸ್ ಅಭ್ಯರ್ಥಿ ಅಮ್ಜದ್ ಪಟೇಲ್ ಅವರಿಗೆ ಲಭಿಸಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಬಿಜೆಪಿಯ ಸೋಮಣ್ಣ ಹಳ್ಳಿಗೆ 6 ಸದಸ್ಯರ ಮತ ಒಳಗೊಂಡಂತೆ ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕರ ಒಂದು ಮತ ಸೇರಿ ಒಟ್ಟು 7 ಮತಗಳಿಗೆ ತೃಪ್ತಿ ಪಡಬೇಕಾಯಿತು.

ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಅಶ್ವಿನಿ ಗದುಗಿನ ಮಠ ಅವರಿಗೆ 25 ಮತ ಲಭಿಸಿದ್ದರೆ, ಬಿಜೆಪಿಯಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ದೇವಮ್ಮ ಕಂದಾ ಅವರಿಗೆ 7 ಮತ ಲಭಿಸಿವೆ.

ಬಿಜೆಪಿಯು ಈ ಚುನಾವಣೆಗೆ ತನ್ನ ಎಲ್ಲಾ ಸದಸ್ಯರಿಗೆ ಕಡ್ಡಾಯ ಭಾಗವಹಿಸುವಂತೆ ವಿಪ್ ಜಾರಿ ಮಾಡಿತ್ತು.

ಈ ಚುನಾವಣೆಗೆ ಚುನಾವಣಾಧಿಕಾರಿಯಾಗಿದ್ದ ಕೊಪ್ಪಳ ಜಿಲ್ಲೆಯ ಉಪವಿಭಾಗಾಧಿಕಾರಿ ಮಹೇಶ್ ಮಾಲಗಿತ್ತಿ ಅವರು ಮತ ಎಣಿಕೆ ನಂತರ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹೆಸರನ್ನು ಘೋಷಣೆ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News