ಕೊಪ್ಪಳ | ಸೇವಾ ನ್ಯೂನತೆ : ಮಣಪ್ಪುರಂ ಪೈನಾನ್ಸ್ ಗೆ ಒಂದು ಲಕ್ಷ ರೂ. ದಂಡ
ಕೊಪ್ಪಳ : ಫಿರ್ಯಾದುದಾರರಿಗೆ ಎದುರುದಾರ ಮಣಪ್ಪುರಂ ಪೈನಾನ್ಸ್ ಲಿಮಿಟೆಡ್ ಕಾರಟಗಿ ಬ್ರಾಂಚ್ ವತಿಯಿಂದ ಉಂಟಾದ ಸೇವಾ ನ್ಯೂನತೆ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತೀರ್ಪು ಪ್ರಕಟಿಸಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯ ಮುರಾರಿ ನಗರದ ವ್ಯಾಪಾರಿ ಸೈಯದ್ ಸುಭಾನಿ ಪಾಷ ಅವರು, ಮಣಪ್ಪುರಂ ಪೈನಾನ್ಸ್ ಲಿಮಿಟೆಡ್ ಕಾರಟಗಿ ಬ್ರಾಂಚ್, ತಮ್ಮ ವ್ಯಾಪಾರದ ಅವಶ್ಯಕತೆಗಾಗಿ 4 ಹಂತಗಳಲ್ಲಿ 2020ರ ಜುಲೈ 16 ರಿಂದ 2020ರ ಜುಲೈ 30ರವರೆಗೆ ಒಟ್ಟು 393.800 ಗ್ರಾಂ ಬಂಗಾರದ ಆಭರಣಗಳನ್ನು ಅಡವಿಟ್ಟು ಒಟ್ಟು 12,30,555 ರೂ. ಗಳನ್ನು ಸಾಲವಾಗಿ ಪಡೆದುಕೊಂಡಿರುತ್ತಾರೆ.
ದೂರುದಾರರಾದ ಸೈಯದ್ ಸುಭಾನಿ ಪಾಷ ರವರು ಅಸಲು ಮತ್ತು ಬಡ್ಡಿಯನ್ನು ಮಣಪ್ಪುರಂ ಗೋಲ್ಡ್ ಪೈನಾನ್ಸ್ ರವರು, ಹರಾಜು ಪ್ರಕ್ರಿಯೆ ಪೂರ್ವದಲ್ಲಿ ದೂರುದಾರರಿಗೆ ನೋಟಿಸ್ ಸಹ ನೀಡದೇ, ನಿಯಮಬಾಹಿರವಾಗಿ ಹರಾಜು ಮಾಡಿ ಸೇವಾ ನ್ಯೂನತೆಯನ್ನು ಎಸಗಿರುತ್ತಾರೆ ಹಾಗೂ ದೂರುದಾರರು ಅಡವಿಟ್ಟ ಬಂಗಾರದ ಆಭರಣಗಳನ್ನು ಕಾನೂನಿನ ಪ್ರಕ್ರಿಯೆ ಪಾಲಿಸದೇ ನಿಯಮಬಾಹಿರವಾಗಿ ಹರಾಜು ಮುಖಾಂತರ ಮಾರಾಟ ಮಾಡಿ, ಅನುಚಿತ ವ್ಯಾಪಾರ ಪದ್ಧತಿ ಅನುಸರಿಸಿದ್ದರು, ದೂರುದಾರನು ವಕೀಲರ ಮೂಲಕ ನೋಟಿಸ್ ನೀಡಿದಾಗಲೂ ಸಹ ಸ್ಪಂದಿಸದೇ ನಿರ್ಲರ್ಕ್ಷ ತೋರಿದ್ದಾರೆ.
ಇದರಿಂದ ಬೇಸತ್ತ ಸೈಯದ್ ಸುಭಾನಿ ಪಾಷ ಮಣಪ್ಪುರಂ ಪೈನಾನ್ಸ್ ಲಿಮಿಟಿಡ್ ವಿರುದ್ದ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ಸಲ್ಲಿಸಿದ್ದರು.
ದೂರನ್ನು ದಾಖಲಿಸಿಕೊಂಡ ಕೊಪ್ಪಳ ಜಿಲ್ಲಾ ಆಯೋಗದ ಅಧ್ಯಕ್ಷ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು.ಎನ್.ಮೇತ್ರಿ ರವರು ಉಭಯ ಪಕ್ಷಗಾರರ ವಾದ ಪ್ರತಿವಾದಗಳನ್ನು ಆಲಿಸಿ, ಎದುರುದಾರರಿಂದ ಉಂಟಾದ ಸೇವಾ ನ್ಯೂನತೆಗಾಗಿ ಹಾಗೂ ಅನುಚಿತ ವ್ಯಾಪಾರ ಪದ್ಧತಿ ಅನುಸರಿಸಬೇಕಾಗಿರುವುದರಿಂದ ಮಣಪ್ಪುರಂ ಪೈನಾನ್ಸ್ ಸೇವಾ ನ್ಯೂನತೆ ಎಸಗಿರುವುದ್ದಕ್ಕಾಗಿ 1 ಲಕ್ಷ ರೂ.ಗಳಿಗೆ ವಾರ್ಷಿಕ ಶೇ. 6ರ ಬಡ್ಡಿಯಂತೆ ಸೈಯದ್ ಸುಭಾನಿ ಪಾಷಗೆ ನೀಡುವಂತೆ ಆದೇಶಿಸಿದೆ.
ದೂರುದಾರರಿಗೆ ಉಂಟಾದ ಮಾನಸಿಕ ಯಾತನೆಗಾಗಿ 10,000 ರೂ.ಗಳನ್ನು ಹಾಗೂ ದೂರಿನ ಖರ್ಚು 5,000 ರೂ.ಗಳನ್ನು ಆದೇಶದ ದಿನಾಂಕದಿಂದ 45 ದಿನಗಳ ಒಳಗಾಗಿ ಪಾವತಿಸುವಂತೆ ಆದೇಶವನ್ನು ನೀಡಿದೆ ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ಪಿ.ಎಸ್ ಅಮರದೀಪ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.