ಕೊಪ್ಪಳ | ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ : ಆರೋಪಿಗೆ 20ವರ್ಷ ಶಿಕ್ಷೆ

Update: 2025-02-17 20:59 IST
ಕೊಪ್ಪಳ | ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ : ಆರೋಪಿಗೆ 20ವರ್ಷ ಶಿಕ್ಷೆ
  • whatsapp icon

ಕೊಪ್ಪಳ : ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪ ಸಾಬಿತಾದ ಹಿನ್ನೆಲೆಯಲ್ಲಿ ಕಳಮಳ್ಳಿ ತಾಂಡಾದ ವಿಜಯಕುಮಾರ ಚವ್ಹಾಣ ಎಂಬುವನಿಗೆ 20 ವರ್ಷಗಳ ಜೈಲು ಶಿಕ್ಷೆಯನ್ನು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ(ಪೋಕ್ಸೊ)ದ ನ್ಯಾಯಾಧೀಶರು ವಿಧಿಸಿದ್ದಾರೆ.

ಪ್ರಕರಣದ, ವಿಚಾರಣೆಯನ್ನು ನ್ಯಾಯಾಲಯವು ನಡೆಸಿದ್ದು, ಆರೋಪಿ ಕಳಮಳ್ಳಿ ತಾಂಡಾದ ವಿಜಯಕುಮಾರ ಚವ್ಹಾಣ್ ನ ಮೇಲೆ ಆರೋಪಣೆಗಳು ಸಾಭೀತಾಗಿವೆ ಎಂದು 20 ವರ್ಷ ಗಳ ಜೈಲು ಶಿಕ್ಷೆ ಹಾಗೂ 20,000 ರೂ. ಗಳ ದಂಡವನ್ನು ಭರಿಸುವಂತೆ ಪೋಕ್ಸೋ ನ್ಯಾಯಾಧೀಶರಾದ ಕುಮಾರ ಡಿ.ಕೆ ಅವರಿದ್ದ ಪೀಠ ಆದೇಶಿಸಿದೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ಪ್ರಕರಣ ನಡೆಸಿ, ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ :

2022ರ ಜುಲೈ 21ರಂದು ರಾತ್ರಿ ಅಪ್ರಾಪ್ತ ವಯಸ್ಸಿನ ಬಾಲಕಿ ತನ್ನ ಗ್ರಾಮದಲ್ಲಿ ಗೆಳತಿಯ ಮನೆಗೆ ನೋಟ್ಸ್ ತೆಗೆದುಕೊಂಡು ಬರಲು ತನ್ನ ಮನೆಯಿಂದ ಹೊರಗಡೆ ಬಂದಾಗ, ತಾವರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಕಳಮಳ್ಳಿ ತಾಂಡಾ ನಿವಾಸಿ ವಿಜಯಕುಮಾರ ಚವ್ಹಾಣ ತನ್ನ ಮೋಟಾರ ಸೈಕಲ್ ಮೇಲೆ ಬಂದು ಬಾಧಿತಳನ್ನು ಅಪಹರಿಸಿ ಕೊಂಡು ಹೇಮಗುಡ್ಡದ ದೇವಸ್ಥಾನಕ್ಕೆ ಹೋಗಿ, ಅಲ್ಲಿನ ಅಡುಗೆ ಮಾಡುವ ಶೆಡ್ಡಿನಲ್ಲಿ ಮಲಗಿ ರಾತ್ರಿ ವೇಳೆಯಲ್ಲಿ ಮದುವೆ ಯಾಗುವುದಾಗಿ ಪುಸಲಾಯಿಸಿ, ಅತ್ಯಾಚಾರ ಮಾಡಿದ್ದಾನೆ.

ನಂತರ 4 ದಿನಗಳವರೆಗೆ ಅಲ್ಲಿಯೇ ತಂಗಿದ್ದು, ಆ ಅವಧಿಯಲ್ಲಿಯೂ ಪ್ರತಿದಿನ ಅತ್ಯಾಚಾರ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ತಾವರಗೇರಾ ಪೋಲಿಸ್ ಠಾಣೆಯ ಮಹಿಳಾ ಪಿ.ಎಸ್.ಐ ವೈಶಾಲಿ ಝಳಕಿ ಅವರು ದೂರು ಸ್ವೀಕರಿಸಿ, ಪ್ರಥಮ ಹಂತದ ತನಿಖೆಯನ್ನು ನಿರ್ವಹಿಸಿ, ಮುಂದಿನ ತನಿಖೆಯನ್ನು ಸಿಪಿಐ ನಿಂಗಪ್ಪ ಎನ್.ಆರ್. ಅವರು ನಿರ್ವಹಿಸಿದ್ದು, ಈ ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಮೇಲ್ನೋಟಕ್ಕೆ ಸಾಭಿತಾಗಿದ್ದರಿಂದ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News