ಕೊಪ್ಪಳ: ಸಾರ್ವಜನಿಕ ಶೌಚಾಲಯ ಕುಸಿದುಬಿದ್ದು ಮಹಿಳೆಯರಿಬ್ಬರು ಮೃತ್ಯು

Update: 2024-05-18 06:24 GMT

ಕೊಪ್ಪಳ : ಸಾರ್ವಜನಿಕ ಶೌಚಾಲಯ ಕುಸಿದುಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ತಾವರಗೇರಾ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮೃತರನ್ನು ಬಾನು ಬೇಗಂ(40) ಉಮಾಬಾಯಿ ಬಪ್ಪರಗಿ(35) ಎಂದು ಗುರುತಿಸಲಾಗಿದೆ. ತಾವರಗೇರಾ ಪಟ್ಟಣದ 5ನೇ ವಾರ್ಡ್‌ನಲ್ಲಿರುವ ಸಾರ್ವಜನಿಕ  ಶೌಚಾಲಯದ ಕಟ್ಟಡ ಏಕಾಏಕಿ ಕುಸಿದುಬಿದ್ದಿತ್ತು. ಕಟ್ಟಡದ ಅವಶೇಷದಡಿ ಸಿಲುಕಿದ್ದ ಮೂವರು ಮಹಿಳೆಯರಲ್ಲಿ ಬಾನು ಬೇಗಂ ಸ್ಥಳದಲ್ಲೇ ಮೃತಪಟ್ಟಿದ್ದರು ಎನ್ನಲಾಗಿದೆ. 

ಉಳಿದ ಇಬ್ಬರನ್ನು ಕಟ್ಟಡದಡಿಯಿಂದ ಹೊರತೆಗೆದು ಆಸ್ಪತ್ರೆಗೆ ರವಾನಿಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಉಮಾಬಾಯಿ ಬಪ್ಪರಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ʼಸಾರ್ವಜನಿಕ ಶೌಚಾಲಯದ ಕಟ್ಟಡ ಹಳೆಯದ್ದಾಗಿದ್ದು, ಕುಸಿದು ಬಿದ್ದ ಪರಿಣಾಮ ಮಹಿಳೆಯರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು.  ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರು. ಇಬ್ಬರನ್ನು ರಕ್ಷಿಸಲಾಗಿದ್ದು ಅವರಲ್ಲಿ ಒಬ್ಬರು ಮೃತಪಟ್ಟಿದ್ದಾಗಿ ತಿಳಿದು ಬಂದಿದೆʼ ಎಂದು ಕೊಪ್ಪಳ ಎಸ್ಪಿ ಮಾಹಿತಿ ನೀಡಿದ್ದಾರೆ.  

ಸಾರ್ವಜನಿಕ ಶೌಚಾಲಯ ಕುಸಿದುಬೀಳಲು ಕಟ್ಟಡದ ಕಳಪೆ ಕಾಮಗಾರಿಯೇ ಕಾರಣ ಎಂದು ಆರೋಪಿಸಿರುವ ಸ್ಥಳೀಯರು, ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News