ಕೊಪ್ಪಳ | ಏನೇ ಸಮಸ್ಯೆಗಳಿದ್ದರೂ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಕೇಳಬೇಕು : ಮಾಜಿ ಸಚಿವ ಇಕ್ಬಾಲ್ ಅನ್ಸಾರಿ
ಕೊಪ್ಪಳ : ಭಾರತೀಯ ಮುಸ್ಲಿಂರಿಗೆ ಕುರಾನ್ ಮತ್ತು ನಮ್ಮ ದೇಶದ ಸಂವಿಧಾನ ಎರಡು ಬಹಳ ಮುಖ್ಯ ಅದರ ಅಡಿಯಲ್ಲಿ ಬದುಕು ಕಟ್ಟಿಕೊಳ್ಳಬೇಕಾಗಿದೆ, ಏನೇ ಸಮಸ್ಯೆಗಳಿದ್ದರೂ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಕೇಳಬೇಕು, ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಹೋರಾಡಬೇಕು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
ಅವರು ಶನಿವಾರ ಇಲ್ಲಿನ ಸಾಹಿತ್ಯ ಭವನದಲ್ಲಿ ಕೊಪ್ಪಳ ಮುಸ್ಲಿಂ ಯುವ ಸಮಿತಿ ಏರ್ಪಡಿಸಿದ ಭಾರತ ಕಂಡ ವಿವಿಧ ಸ್ವಾತಂತ್ರ್ಯ ಹೋರಾಟ ಗಾರರ ಜಯಂತೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು,
ನಾವು ಭಾರತೀಯ ಪ್ರಜೆಗಳಾಗಿದ್ದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನ ದಂತೆ ನಾವು ನಮ್ಮ ಬದುಕು ಕಟ್ಟಿಕೊಂಡು ರಾಷ್ಟ್ರೀಯ ಭಾವೈಕ್ಯತೆ ಬಳಸಿಕೊಂಡು ಜೀವನ ಸಾಗಿಸಬೇಕು. ಯಾವುದೇ ಕಾರಣಕ್ಕೂ ಇತರರಿಗೆ ನಮ್ಮಿಂದ ನಮ್ಮ ಆಚರಣೆಗಳಿಂದ ಯಾವುದೇ ತೊಂದರೆ ಉಂಟಾಗಬಾರದು. ನಮ್ಮ ಧರ್ಮ ವನ್ನು ಪ್ರೀತಿಸುವುದರ ಜೊತೆಗೆ ಇತರ ಧರ್ಮವನ್ನು ಗೌರವಿಸುವಂಥ ಕೆಲಸ ಆಗಬೇಕು ಯುವಕರಿಗೆ ಉತ್ತಮ ದಾರಿದೀಪವಾಗಬೇಕು ನಮ್ಮ ದೇಶದ ಸ್ವತಂತ್ರಕ್ಕಾಗಿ ಹೋರಾಡಿದ ಮಹಾನ್ ನಾಯಕರ ಆದರ್ಶ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಈ ಸಮಾಜದ ಋಣ ನಮ್ಮ ಕುಟುಂಬದ ಮೇಲಿದೆ ಸಮಾಜದ ಏನೇ ಸಮಸ್ಯೆಗಳಿದ್ದರೂ ಅದಕ್ಕೆ ನೇರ ಸ್ಪಂದನೆ ನೀಡಿ ಅದರ ಇತ್ಯರ್ಥಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ಸರಕಾರದ ವಿಶೇಷ ಅನುದಾನ ಒದಗಿಸಿ ಕೊಡುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದರು.
ಸಂಸದ ಕೆ.ರಾಜಶೇಖರ್ ಹಿಟ್ನಾಳ್, ಮಾಜಿ ಸಂಸದ ಸಂಗಣ್ಣ ಕರಡಿ, ಕಾಡಾ ಅಧ್ಯಕ್ಷ ಹಸನ್ ಸಾಬ್ ಡೋಟಿ ಹಾಳ್, ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ್ ಭೂಮರೆಡ್ಡಿ, ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್, ಸಮಾಜದ ಮುಖಂಡ ರಾದ ಕೆಎಂ ಸಯ್ಯದ್ ಎಂ. ಪಾಷಾ ಕಾಟನ್, ಮುಫ್ತಿ ಮುಹಮ್ಮದ್ ನಜೀರ್, ಅಹಮದ್ ಖಾದ್ರಿ ತಸ್ಕಿನಿ, ಚಿಂತಕ ಹೋರಾಟಗಾರ ಪ್ರೊಫೆಸರ್ ಎಸ್.ಬಿ.ಚಂದ್ರಶೇಖರ್, ರಾಜಶೇಖರ್ ಅಡೂರ್, ಸೋಮಶೇಖರ್ ಹಿಟ್ನಾಳ್, ಯಮನೂರಪ್ಪ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.