ಮೈಕ್ರೋ ಫೈನಾನ್ಸ್ ಗಳ ಹಾವಳಿಗೆ ತತ್ತರಿಸಿದ ಬಡವರು

Update: 2025-01-24 15:17 IST
ಮೈಕ್ರೋ ಫೈನಾನ್ಸ್ ಗಳ ಹಾವಳಿಗೆ ತತ್ತರಿಸಿದ ಬಡವರು

ಸಾಂದರ್ಭಿಕ ಚಿತ್ರ PTI

  • whatsapp icon

ಕೊಪ್ಪಳ : ಜಿಲ್ಲೆಯಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್‌ಳ ಹಾವಳಿ ಹೆಚ್ಚಾಗಿದ್ದು, ಸಾಲ ಕೊಟ್ಟು ವಸೂಲಿಗಾಗಿ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಜನರು ಕುಟುಂಬ ಸಮೇತರಾಗಿ ತಾವು ವಾಸಿಸುವ ಊರನ್ನು ಬಿಟ್ಟು ಬೇರೆಡೆಗೆ ಪಲಾಯನ ಮಾಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.

ಸಾಲ ಕೊಡುವಾಗ ಸಲೀಸಾಗಿ ಸಾಲ ಕೊಡುತ್ತಾರೆ. ನಂತರ ಬಡ್ಡಿ, ಮೀಟರ್ ಬಡ್ಡಿ ಎಂದು ದುಪ್ಪಟ್ಟು ವಸೂಲಿ ಮಾಡುವ ಮೂಲಕ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಅದರಲ್ಲೂ ರೈತರು, ಕೂಲಿ ಕೆಲಸ ಮಾಡುವ ಜನರು ಮತ್ತು ಮಹಿಳೆಯರನ್ನೇ ಗುರಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ವಸೂಲಿಗಾಗಿ ಮನೆಯ ಮುಂದೆ ಬಂದು ಅವಮಾನ ಮಾಡುತ್ತಾರೆ, ನಿಮ್ಮ ಮನೆಗೆ ಬೀಗ ಹಾಕುತ್ತೇವೆ, ಮನೆಯನ್ನು ಹರಾಜು ಹಾಕುತ್ತೇವೆ ಎಂದು ಬೆದರಿಸುತ್ತಾರೆ. ಸ್ವಲ್ಪ ಸಮಯ ಕೊಡಿ ನಿಮ್ಮ ಸಾಲ ತೀರಿಸುತ್ತೇವೆ ಎಂದರೂ ಕೇಳದೇ ತೊಂದರೆ ಕೊಡುತ್ತಾರೆ ಎಂದು ಜನರು ದೂರಿದ್ದಾರೆ.

ನಾವು ಸಾಲ ಮರು ಪಾವತಿಸಲು ಕೊಂಚ ತಡವಾದರೂ ನಮ್ಮ ಮನೆಯಲ್ಲಿರುವ ಸಾಮಾನುಗಳನ್ನು ಹೊತ್ತಿಕೊಂಡು ಹೋಗುತ್ತಾರೆ. ಕೇವಲ 100-200 ರೂ. ಹಣ ಕಡಿಮೆ ಇದ್ದರೂ ದಿನ ಪೂರ್ತಿ ಮನೆಯ ಮುಂದೆ ಬಂದು ನಿಲ್ಲುತ್ತಾರೆ. ಹಣ ಕೊಡುವಂತೆ ಪೀಡಿಸುತ್ತಾರೆ ಎಂದು ಜನರು ಆರೋಪಿಸಿದ್ದಾರೆ.

ಈ ಹಿಂದೆ ಸ್ವಸಹಾಯ ಸಂಘದ ಅಧಿಕಾರಿಗಳಿಂದ ತಾವು ಪಾವತಿ ಮಾಡಿದ ಪೂರ್ಣ ಮೊತ್ತದಲ್ಲಿ ಕಡಿಮೆ ಮೊತ್ತವನ್ನು ಪುಸ್ತಕದಲ್ಲಿ ಬರೆಯುವ ಮೂಲಕ ಮಹಿಳೆಯರಿಗೆ ವಂಚನೆ ಮಾಡುತ್ತಿದ್ದಾರೆ ಎನ್ನುವ ಅರೋಪಗಳು ಕೇಳಿ ಬಂದಿದ್ದವು, ಸಾಲ ಮರುಪಾವತಿ ಮಾಡುವಾಗ ಸ್ವಲ್ಪ ತಡಮಾಡಿದರೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ತೇಜೋವಧೆ ಮಾಡುತ್ತಾರೆ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇದರ ವಿರುದ್ದ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಮೈಕ್ರೋ ಫೈನಾನ್ಸ್‌ಗಳ ಕಿರುಳಕ್ಕೆ ಬೇಸತ್ತಿರುವ ಸಂತ್ರಸ್ತರು ಒತ್ತಾಯಿಸಿದ್ದಾರೆ.

ದುಡಿಯಲು ದುಡಿಮೆ ಇಲ್ಲ, ಒಂದು ತಿಂಗಳು ಕಟ್ಟಿಲ್ಲ ಎಂದು ಮನೆಯಲ್ಲಿರುವ ಮಂಚವನ್ನು ಎತ್ತಿಕೊಂಡು ಹೋಗಿದ್ದಾರೆ ಮತ್ತು ಮಕ್ಕಳ ಕಾಲಿನಲ್ಲಿರುವ ಚೈನ್ ಗಳನ್ನು ತೆಗೆದುಕೊಂಡಿದ್ದಾರೆ.

-ಹೆಸರು ಹೇಳಲು ಇಚ್ಚಿಸದ ಮಹಿಳೆ

ಮನುಷ್ಯನಿಗೆ ಆಸೆ ಇರುತ್ತೆ ಆ ಆಸೆಯಿಂದ ಮೊಬೈಲ್, ಫ್ರೀಜ್ ಮತ್ತು ಇತರೆ ಸಾಮಾನುಗಳನ್ನು ತೆಗೆದುಕೊಂಡಿರುತ್ತಾರೆ. ಆದರೆ ಅದು ಅಪರಾಧವಾಗುತ್ತೆ. ಒಂದು ದಿನ ಕಟ್ಟುವುದು ತಡವಾದರೆ 500 ರೂ ದಂಡ ವಿಧಿಸುತ್ತಾರೆ. ಕೊನೆಗೆ ಜನರು ಊರು ಬಿಟ್ಟು ಹೋಗುತ್ತಾರೆ.

-ಹೆಸರು ಹೇಳಲು ಇಚ್ಚಿಸದ ವ್ಯಕ್ತಿ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ಎಂ.ಡಿ ಅಖೀಲ್ ಉಡೇವು

contributor

Similar News