ಕೊಪ್ಪಳ ನಗರದಲ್ಲಿ ಬಿಎಸ್ಪಿಎಲ್ ಕಾರ್ಖಾನೆ ಸ್ಥಾಪನೆಗೆ ವಿರೋಧ: ಅಂಗಡಿಗಳು ಬಂದ್, ಶಾಲೆಗಳಿಗೆ ರಜೆ
Update: 2025-02-24 09:33 IST

ಕೊಪ್ಪಳ, ಫೆ.23: ಕೊಪ್ಪಳ ನಗರದ ಬಳಿ ಬಿಎಸ್ಪಿಎಲ್ ಕಾರ್ಖಾನೆ ಸ್ಥಾಪನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮತ್ತು ಪರಿಸರ ರಕ್ಷಣೆಗಾಗಿ ವಿವಿಧ ಸಂಘಟನೆಗಳು ಸೇರಿ ನೀಡಿದ್ದ ಕೊಪ್ಪಳ ಬಂದ್ ಗೆ ಕರೆ ಉತ್ತಮ ಸ್ಪಂದನ ವ್ಯಕ್ತವಾಗಿದೆ. ಸೋಮವಾರ ಬೆಳಗ್ಗೆಯಿಂದಲೇ ಸಾರ್ವಜನಿಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ವ್ಯಕ್ತಪಡಿಸಿವೆ.
ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಜನ ಸಂಚಾರ ಇಲ್ಲದ ಕಾರಣ ಕೊಪ್ಪಳ ಸ್ತಬ್ಧಗೊಂಡಿದೆ.
ಬೇರೆ ಊರಿನಿಂದ ಮತ್ತು ಹಳ್ಳಿಗಳಿಂದ ನಗರಕ್ಕೆ ಬರುವ ಜನರು ಆಟೋ ಸಂಚಾರ ಇಲ್ಲದ ಕಾರಣ ಪರದಾಡುವ ಸ್ಥಿತಿ ಏರ್ಪಟ್ಟಿದೆ. ಹೊರಗಿನಿಂದ ಬರುವ ಬಸ್ ಗಳನ್ನು ನಗರದ ಹೊರವಲಯದಲ್ಲೇ ನಿಲ್ಲಿಸಲಾಗುತ್ತಿದೆ.
