ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ, ನಿರುದ್ಯೋಗ ಹೆಚ್ಚಳವೇ ಮೋದಿ ಸಾಧನೆ : ಸಿಎಂ ಸಿದ್ದರಾಮಯ್ಯ

Update: 2024-04-18 17:03 GMT

ದೊಡ್ಡಬಳ್ಳಾಪುರ  ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ, ರೈತರ ಆದಾಯ ಕುಸಿತ, ನಿರುದ್ಯೋಗ ಹೆಚ್ಚಳ, ದೇಶದ ಆರ್ಥಿಕತೆ ಕುಸಿತ ಮೋದಿಯವರ ಸಾಧನೆ. ಈ ಚಂದಕ್ಕೆ ಇವರು ಪ್ರಧಾನಿ ಆಗಬೇಕೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಾ ರಾಮಯ್ಯ ಪರವಾಗಿ ದೊಡ್ಡಬಳ್ಳಾಪುರದಲ್ಲಿ ರೋಡ್ ಶೋ ನಡೆಸಿ ಮಾತನಾಡಿದರು.

ಹತ್ತತ್ತು ವರ್ಷ ಪ್ರಧಾನಿ ಆಗಿ ರೈತರಿಗೆ, ಕಾರ್ಮಿಕರಿಗೆ, ಯುವ ಸಮೂಹಕ್ಕೆ, ಮಹಿಳೆಯರಿಗೆ, ದುಡಿಯುವ ವರ್ಗಗಳಿಗೆ, ಕೃಷಿ ಕಾರ್ಮಿಕರಿಗೆ, ಮಧ್ಯಮ ವರ್ಗದವರಿಗೆ, ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳಿಗೆ ಒಂದೇ ಒಂದು ಕಾರ್ಯಕ್ರಮವನ್ನೂ ಕೊಡಲಾಗಲಿಲ್ಲವಲ್ಲ ಏಕೆ?. ಮತ್ತೆ ನೀವು ಪ್ರಧಾನಿ ಆಗಿ ಭಾರತೀಯರಿಗೆ , ದೇಶಕ್ಕೆ ಸಿಕ್ಕಿದ್ದಾದರೂ ಏನು ಎಂದು ಪ್ರಶ್ನಿಸಿದರು.

ವಿದೇಶದಿಂದ ಕಪ್ಪು ಹಣ ತರುವುದಾಗಿ ಹೇಳಿದ್ದಿರಿ, ತರಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದಿರಿ, ಹೊಸ ಉದ್ಯೋಗ ಸೃಷ್ಟಿಯಾಗುವುದಿರಲಿ ಇರುವ ಉದ್ಯೋಗಗಳೇ ನಷ್ಟ ಆದವು. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದಿರಿ, ಆದರೆ ರೈತರ ಖರ್ಚು ಮೂರು ಪಟ್ಟು ಆಗಿದೆ ಎಂದು ಮೋದಿ ವೈಫಲ್ಯಗಳ ಸುದೀರ್ಘ ಪಟ್ಟಿಯನ್ನೇ ಪ್ರಸ್ತಾಪಿಸಿದರು.

ಕೋವಿಡ್ ಭ್ರಷ್ಟಾಚಾರಿಗೆ ತಕ್ಕ ಶಾಸ್ತಿ

ಕೊರೋನಾ ಸಂದರ್ಭದಲ್ಲೂ ಕೋಟಿ ಕೋಟಿ ಕೊಳ್ಳೆ ಹೊಡೆದವರನ್ನು ಕ್ಷಮಿಸಲು ಸಾಧ್ಯವೇ? ಕೋವಿಡ್ ಹಗರಣದ ತನಿಖೆ ನಡೆಯುತ್ತಿದೆ. ಹಗರಣ ನಡೆದಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿರುವ ಬಗ್ಗೆ ನನಗೆ ಮಾಹಿತಿ ಇದೆ. ತನಿಖೆ ಪೂರ್ಣಗೊಂಡ ಬಳಿಕ ಭ್ರಷ್ಟಾಚಾರಿಕೆ ತಕ್ಕ ಶಾಸ್ತಿ ಆಗುತ್ತದೆ. ಆದ್ದರಿಂದ ಬಿಜೆಪಿ ಅಭ್ಯರ್ಥಿ ಸುಧಾಕರ್ ಅವರನ್ನು ಸೋಲಿಸಿ ಕನ್ನಡ ನಾಡಿನ ಪರವಾಗಿ ಧ್ವನಿ ಎತ್ತುವ ರಕ್ಷಾ ರಾಮಯ್ಯರನ್ನು ಗೆಲ್ಲಿಸಿಕೊಂಡು ಬನ್ನಿ. ರಕ್ಷಾ ರಾಮಯ್ಯ ನೂರಕ್ಕೆ ನೂರು ಗೆಲ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News