ಕಾಂಗ್ರೆಸ್‌ ಸರಕಾರ ಪ್ರತಿ ಕುಟುಂಬದಿಂದ 8-10 ಸಾವಿರ ರೂ. ದರೋಡೆ ಮಾಡುತ್ತಿದೆ : ಆರ್‌.ಅಶೋಕ್

Update: 2024-06-29 11:32 GMT

ಚಿಕ್ಕಬಳ್ಳಾಪುರ : ಕಾಂಗ್ರೆಸ್‌ ಸರಕಾರದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನದ ಕುರಿತು ಕಚ್ಚಾಟ ನಡೆಯುತ್ತಿದ್ದು, ಅಭಿವೃದ್ಧಿ ಕೆಲಸಕ್ಕೆ ಯಾರೂ ಮುಂದಾಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕಾಗಿ ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಸ್ಥಾನದ ಕುರಿತು ಕಾಂಗ್ರೆಸ್‌ ಪಕ್ಷದೊಳಗೆ ಒಡಕು ಉಂಟಾಗಿದೆ. ಈ ಬಗ್ಗೆ ಒಕ್ಕಲಿಗ ಸ್ವಾಮೀಜಿ ಕೂಡ ಮಾತಾಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಹಾಗೂ ಮೂರು ಡಿಸಿಎಂ ಮಾಡುವಲ್ಲಿ ಎಲ್ಲರೂ ಮುಳುಗಿದ್ದು, ಅಭಿವೃದ್ಧಿ ಕೆಲಸ ಮಾಡಲು ಯಾರೂ ಮುಂದಾಗುತ್ತಿಲ್ಲ. ಈ ಸರಕಾರಕ್ಕೆ ಕುಡಿಯುವ ನೀರು ಕೊಡುವ ಯೋಗ್ಯತೆಯೂ ಇಲ್ಲವಾಗಿ, ಜನರು ಕಲುಷಿತ ನೀರು ಸೇವಿಸಿ ಸಾಯುತ್ತಿದ್ದಾರೆ. ಡೆಂಘೀ ಸೋಂಕು ಹರಡಿ ಜನರು ತೊಂದರೆಗೊಳಗಾಗಿದ್ದರೂ ಅದಕ್ಕೆ ಸೂಕ್ತ ಕ್ರಮ ವಹಿಸಿಲ್ಲ" ಎಂದರು.

ಈಗ ಒಕ್ಕಲಿಗರು ಹಾಗೂ ಲಿಂಗಾಯತರು ಮಾತಾಡುತ್ತಿದ್ದಾರೆ. ಮುಂದೆ ಕುರುಬ ಸಮುದಾಯದವರು ಮಾತಾಡುತ್ತಾರೆ. ಜಾತಿಗಳ ನಡುವೆ ಕಾಂಗ್ರೆಸ್‌ ಕಚ್ಚಾಟ ಹುಟ್ಟುಹಾಕಿರುವುದು ಒಳ್ಳೆಯದಲ್ಲ. ಜಾತಿಗಳನ್ನು ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಟೀಕಿಸಿದರು.

ಒಂದು ಕುಟುಂಬಕ್ಕೆ 2,000 ರೂ. ನೀಡುತ್ತೇವೆಂದು ಹೇಳಿದ ಕಾಂಗ್ರೆಸ್‌, 8-10 ಸಾವಿರ ರೂ. ದರೋಡೆ ಮಾಡುತ್ತಿದೆ. ಹಾಲಿನ ದರವನ್ನು ಕಳೆದ ವರ್ಷ 3 ರೂ. ಹೆಚ್ಚಿಸಿ, ಈಗ 2 ರೂ. ಹೆಚ್ಚಿಸಿದ್ದಾರೆ. ಪೆಟ್ರೋಲ್‌-ಡೀಸೆಲ್‌ ದರವನ್ನು ನಿರ್ದಾಕ್ಷಿಣ್ಯವಾಗಿ ಏರಿಸಿದ್ದರಿಂದ ಎಲ್ಲಾ ದರಗಳು ಏರಿಕೆಯಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಾದ ಕೂಡಲೇ ಬಸ್‌ ಟಿಕೆಟ್‌ ದರ ಹೆಚ್ಚಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಸಾರಿಗೆ ನಿಗಮಗಳಿಗೆ ಇನ್ನೂ ಹಣ ಬಾಕಿ ಉಳಿಸಿಕೊಳ್ಳಲಾಗಿದೆ. ಹಾಲಿನ ಪೋತ್ಸಾಹಧನವೂ ಬಾಕಿ ಇದೆ. ಮದ್ಯದ ದರವನ್ನು ಇದೇ ಜುಲೈನಿಂದ ಏರಿಸಲಾಗುತ್ತದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News