ಪಾರಂಪರಿಕ ಶ್ರೀರಂಗಪಟ್ಟಣ ದಸರಾಗೆ ನಟ ಶಿವರಾಜ್‍ ಕುಮಾರ್ ಚಾಲನೆ

Update: 2024-10-04 15:29 GMT

ಮಂಡ್ಯ/ಶ್ರೀರಂಗಪಟ್ಟಣ: ನಾಲ್ಕುದಿನಗಳ ಪಾರಂಪರಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಖ್ಯಾತ ನಟ ಡಾ.ಶಿವರಾಜ್‍ ಕುಮಾರ್ ಕಿರಂಗೂರು ಬನ್ನಿಮಂಟಪದ ಬಳಿ ಚಾಮುಂಡೇಶ್ವರಿ ವಿಗ್ರಹ ಹೊತ್ತ ಜಂಬೂ ಸವಾರಿ ಮೆರವಣಿಗೆಗೆ ಶುಕ್ರವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಸಚಿವರಾದ ಕೃಷ್ಣಭೈರೇಗೌಡ, ದಿನೇಶ್ ಗುಂಡೂರಾವ್, ಸ್ಥಳೀಯ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಮಂಡ್ಯ ಶಾಸಕ ಪಿ.ರವಿಕುಮಾರ್, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಇತರ ಗಣ್ಯರು ಉಪಸ್ಥಿತರಿದ್ದರು.

ಅಂಬಾರಿಯಲ್ಲಿದ್ದ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಅಂಬಾರಿ ಹೊತ್ತ ಮಹೇಂದ್ರ ಆನೆ ಗಾಂಭೀರ್ಯದೊಂದಿಗೆ ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಸ್ಥಾನದ ಕಡೆಗೆ ಸಾಗಿತು. ಲಕ್ಷ್ಮಿ ಮತ್ತು ಹಿರಣ್ಯ ಹೆಸರಿನ ಆನೆಗಳು ಮಹೇಂದ್ರನಿಗೆ ಸಾಥ್ ನೀಡಿದರು. ಹತ್ತಾರು ಕಲಾತಂಡಗಳ ಪ್ರದರ್ಶನ ಹಾಗೂ ಸ್ಥಬ್ಧಚಿತ್ರಗಳು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರನ್ನು ರಂಜಿಸಿದವು.

ವೀರಗಾಸೆ, ಸೋಮನ ಕುಣಿತ, ಡೊಳ್ಳು ಕುಣಿತ, ನಗಾರಿ/ತಮಟೆ, ನಂದಿಧ್ವಜ ಕುಣಿತ, ಗಾರುಡಿಗೊಂಬೆ, ಚಿಲಿಪಿಲಿ ಗೊಂಬೆ, ಕೊಂಬು ಕಹಳೆ, ಒನಕೆ ಕುಣಿತ, ದೊಣ್ಣೆ ವರಸೆ, ಕತ್ತಿವರಸೆ, ಬೆಂಕಿ ಭರಾಟೆ, ಮಹಿಳಾಪಟ ಕುಣಿತ, ಬ್ಯಾಂಡ್‍ಸೆಟ್ ವಾದನ, ನಾದಸ್ವರ, ಮಹಿಳಾ ಕೋಲಾಟ ಸೇರಿದಂತೆ ಇತರೆ ಜಾನಪದ ಕಲಾತಂಡಗಳ ಪ್ರದರ್ಶನ ಮೈನವಿರೇಳಿಸಿತು.

ಸುನ್ನಿ ಚಿತ್ರಗಳು ರೇಷ್ಮೆ ಇಲಾಖೆ ರೇಷ್ಮೆ ಹುಳು ಸಾಕಾಣಿಕೆ, ಅದರ ಉತ್ಪನ್ನಗಳು, ವಿದ್ಯಾ ಭಾರತಿ ಶಾಲೆಯ ನವದುರ್ಗಿಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗೃಹಲಕ್ಷ್ಮಿ ಯೋಜನೆ, ಶಾಲಾ ಶಿಕ್ಷಣ ಇಲಾಖೆಯ ಜ್ಞಾನಪೀಠ ಪ್ರಶಸ್ತಿ ವಿಜೇತರು, ಕೃಷಿ, ತೋಟಗಾರಿಕೆ, ಖಾದಿ ಮತ್ತು ಗ್ರಾಮೋದ್ಯೋಗ, ಆರೋಗ್ಯ ಇಲಾಖೆ, ಅಗ್ನಿಶಾಮಕ ಇಲಾಖೆ ಹಾಗೂ ಭಗವಾನ್ ಬುದ್ಧ ಕುರಿತು ಸ್ಥಬ್ಧಚಿತ್ರಗಳು ಮೆರವಣಿಗೆಗೆ ಮೆರಗು ತಂದುಕೊಟ್ಟವು.


 






 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News