ಬಿಜೆಪಿ-ಜೆಡಿಎಸ್ ಪಕ್ಷಗಳ ನಡುವೆ ಸಣ್ಣಪುಟ್ಟ ಘರ್ಷಣೆ ಇರುವುದು ಸಹಜ: ಎಚ್.ಡಿ. ಕುಮಾರಸ್ವಾಮಿ

Update: 2024-03-28 15:14 GMT

ಮಂಡ್ಯ: ಲೋಕಸಭಾ ಚುನಾವಣೆಯ ನಂತರ, ಬರುವ ಡಿಸೆಂಬರ್ ತಿಂಗಳೊಳಗೆ ರಾಜ್ಯದ ಕಾಂಗ್ರೆಸ್ ಸರಕಾರ ತಾನೇ ಪತನವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಘೋಷಣೆ ನಂತರ ಮೊದಲ ಬಾರಿಗೆ ಗುರುವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ನಡೆದ ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ಸಮನ್ವಯ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಮೈತ್ರಿ ಪಕ್ಷಗಳು 28ಕ್ಕೆ 28 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಮುಟ್ಟುವುದರಲ್ಲಿ ಯಾವುದೇ ಸಂಶಯವಿಲ್ಲ. ಜಿಲ್ಲೆಯ ಎರಡೂ ಪಕ್ಷಗಳ ಮುಖಂಡರು ಒಗ್ಗಟ್ಟಾಗಿ ಹೊರಟರೆ ಮಂಡ್ಯದಲ್ಲಿ ಐತಿಹಾಸಿಕವಾದ ಗೆಲುವನ್ನು ತಂದು ಕೊಡಬಹುದು ಎಂದು ಅವರು ಮನವಿ ಮಾಡಿದರು.

ಬಿಜೆಪಿ-ಜೆಡಿಎಸ್ ಪಕ್ಷಗಳ ನಡುವೆ ಸಣ್ಣಪುಟ್ಟ ಘರ್ಷಣೆ ಇರುವುದು ಸಹಜ. ಆದರೆ, ರಾಜ್ಯದ ಅಭಿವೃದ್ಧಿ ಮತ್ತು ಸುಭದ್ರ ಸರಕಾರದ ದೃಷ್ಟಿಯಿಂದ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಅದರಲ್ಲಿ ಯಶಸ್ವಿಯೂ ಆಗುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಪಕ್ಷದಿಂದ ಶಕ್ತಿ ತುಂಬಿಕೊಂಡು ಕಾಂಗ್ರೆಸ್ ಹೋಗಿ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರಿಗೆ ಜನತಾ ದಳವನ್ನು ಮುಗಿಸುವುದೊಂದೇ ಗುರಿ. ಆದರೆ, ಎಷ್ಟೇ ಶ್ರಮಪಟ್ಟರೂ ಅದಕ್ಕೆ ಜೆಡಿಎಸ್ ಕಾರ್ಯಕರ್ತರು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ತನ್ನ ಸ್ವಂತ ದುಡಿಮೆಯಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿಲ್ಲ. ಕಳೆದ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಒಂದಾಗದೆ ಪರಸ್ಪರ ಪೈಪೋಟಿಗೆ ಇಳಿದಿದ್ದರಿಂದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ಕಾರಣವಾಯಿತು ಎಂದು ಅವರು ಹೇಳಿಕೊಂಡರು.

2006-07ರ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದ 20 ತಿಂಗಳ ಆಡಳಿತವನ್ನು ರಾಜ್ಯದ ಜನತೆ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಆದರೆ, ಕೆಲವು ಕಾಣದ ಕೈಗಳ ಚಿತಾವಣೆಯಿಂದ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರವಾಗಲಿಲ್ಲ. ಇದರ ಪರಿಣಾಮ 17 ವರ್ಷ ವನವಾಸ ಅನುಭವಿಸಿದ್ದೇನೆ ಎಂದು ಅವರು ಅಲವತ್ತುಕೊಂಡರು.

ಆರೋಗ್ಯದ ನೆಪಮಾಡಿಕೊಂಡು ನಾಟಕವಾಡುವ ಜಾಯಮಾನ ನನ್ನದಲ್ಲ. ಮಂಡ್ಯದ ಜನರ, ನನ್ನ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಅಪೇಕ್ಷೆಗೆ ತಲೆಬಾಗಿ ಸ್ಪರ್ಧೆ ಮಾಡಿದ್ದು, ಹಿಂದೆ ಸರಿಯುವ ಮಾತೇ ಇಲ್ಲ. ಕಾಂಗ್ರೆಸ್ ಅಭ್ಯರ್ಥಿಯ ದುಡ್ಡಿಗೆ ಮತದಾರರು ಬಲಿಯಾಗುವುದಿಲ್ಲ ಎಂದು ಅವರು ಹೆಳಿದರು.

ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಿ.ಎಸ್.ಪುಟ್ಟರಾಜು, ಕೆ.ಸಿ.ನಾರಾಯಣಗೌಡ, ಸಾ.ರಾ.ಮಹೇಶ್, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಶಾಸಕರಾದ ಎಚ್.ಟಿ.ಮಂಜು, ಮಂಜೇಗೌಡ, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ಕೆ.ಸುರೇಶ್‍ಗೌಡ, ಜಿ.ಬಿ.ಶಿವಕುಮಾರ್, ರಾಮದಾಸ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಡಾ.ಸಿದ್ದರಾಮಯ್ಯ, ಬಿ.ಆರ್.ರಾಮಚಂದ್ರು, ಅಶೋಕ್ ಜಯರಾಂ, ಉಭಯ ಪಕ್ಷಗಳ ಇತರೆ ಮುಖಂಡರು ಉಪಸ್ಥಿತರಿದ್ದರು.

“ಅಧಿಕಾರದ ಅಮಲಿನಲ್ಲಿ ಮೆರೆಯುತ್ತಿರುವ, ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಪಾಠ ಕಲಿಸಲು ಜನತೆ ತೀರ್ಮಾನಿಸಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ಪರವಾದ ಅಲೆಯಿಂದಾಗಿ ಕಾಂಗ್ರೆಸ್ ಕಂಗಾಲಾಗಿದೆ. ಮಂಡ್ಯದ ಜನರಿಗೋಸ್ಕರ ಪ್ರಾಣವನ್ನು ಮುಡಿಪಾಗಿಟ್ಟಿರುವ ಎಚ್.ಡಿ.ಕುಮಾರಸ್ವಾಮಿ ಅವರ ಗೆಲುವು ನಿಶ್ಚಿತವಾಗಿದೆ.”

-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News