ಶ್ರೀರಂಗಪಟ್ಟಣ ದಸರಾ: ಅಂಬಾರಿ ಮೆರವಣಿಗೆಗೆ ಮುನ್ನ ಅಡ್ಡಾದಿಡ್ಡಿ ಓಡಿ ಆತಂಕ ಸೃಷ್ಠಿಸಿದ ಆನೆ
ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಬಾರಿ ಮೆರವಣಿಗೆಗೆ ಮೈಸೂರಿನಿಂದ ಕರೆತಂದಿದ್ದ ಆನೆಯೊಂದು ಅಂಬಾರಿ ಮೆರವಣಿಗೆಗೆ ಮುನ್ನ ಅಡ್ಡಾದಿಡ್ಡಿ ಓಡಾಡುವ ಮೂಲಕ ಆತಂಕ ಸೃಷ್ಠಿಸಿತು.
ಅಂಬಾರಿ ಮೆರವಣಿಗೆ ಸಿದ್ದತೆ ಪೂರ್ವದಲ್ಲಿ ಶ್ರೀರಂಗನಾಥ ದೇವಾಲಯದ ಆವರಣದಲ್ಲಿದ್ದ ಮೂರು ಆನೆಗಳ ಪೈಕಿ ಹಿರಣ್ಯ ಹೆಸರಿನ ಆನೆ ಇದ್ದಕ್ಕಿದ್ದಂತೆ ಓಡಾಡಿತು. ಬೆಚ್ಚಿಬಿದ್ದ ಜನರು ದಿಕ್ಕಾಪಾಲಾಗಿ ಓಡಿದರು. ಕೊನೆಗೆ ಮಾವುತರು ಆನೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.
ಅಂಬಾರಿ ಮೆರವಣಿಗೆ ಹಿಂದಿನ ದಿನ ಗುರುವಾರವೂ ಇದೇ ಹಿರಣ್ಯ ಆನೆಯು ಶ್ರೀರಂಗನಾಥ ದೇವಾಲಯದ ಬಳಿ ಪೂಜೆ ಸಲ್ಲಿಸುತ್ತಿದ್ದಾಗ ದೂರದಲ್ಲಿ ಕಟ್ಟಿದ್ದ ಬಿಳಿ ಕುದುರೆಯನ್ನು ನೋಡಿ ಬೆಚ್ಚಿ ಅಡ್ಡಾದಿಡ್ಡಿ ಓಡಿದಾಗ ಮಾವುತರು ಸಮಾಧಾನಿಸಿ ನಿಯಂತ್ರಿಸಿದ್ದರು.
ಆದರೆ, ಅಂಬಾರಿ ಮೆರವಣಿಗೆಯಲ್ಲಿ ಅಂಬಾರಿ ಹೊತ್ತ ಮಹೇಂದ್ರ ಆನೆ ಮತ್ತು ಹಿರಣ್ಯ ಹಾಗೂ ಲಕ್ಷ್ಮಿ ಆನೆಗಳು ಶಾಂತವಾಗಿ ಚಲಿಸುವ ಮೂಲಕ ಜನರಲ್ಲಿ ಮೂಡಿದ್ದ ಆತಂಕವನ್ನು ದೂರು ಮಾಡಿದವು.