ಎಚ್‌ಡಿಕೆ ತಮ್ಮ ಹಿಂದಿನ ಯೂಟರ್ನ್ ಹೇಳಿಕೆಗಳ ಬಗ್ಗೆ ಮಂಡ್ಯದಲ್ಲಿ ಉತ್ತರ ನೀಡಲಿ : ಡಿ.ಕೆ.ಶಿವಕುಮಾರ್

Update: 2024-08-06 13:49 GMT

PC : x/@DKShivakumar

ಮಂಡ್ಯ: “ಕುಮಾರಸ್ವಾಮಿ ಅವರು ಈ ಹಿಂದೆ ತಾವೇ ನೀಡಿರುವ ಯೂಟರ್ನ್ ಹೇಳಿಕೆಗಳ ಬಗ್ಗೆ ಉತ್ತರ ನೀಡಲಿ. ಅವರು ನುಡಿದಂತೆ ನಡೆಯಲಿ, ಕೊಟ್ಟ ಮಾತು ತಪ್ಪುವುದನ್ನು ಬಿಡಲಿ” ಎಂದು ಡಿಸಿಎಂ ಡಿಕೆ.ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.

ಮಂಡ್ಯದ ಮೈಶುಗರ್ ಕಾರ್ಖಾನೆ ಮೈದಾನದಲ್ಲಿ ಮಂಗಳವಾರ ನಡೆದ ʼಜನಾಂದೋಲನ ಸಭೆʼ ಯಲ್ಲಿ ಈ ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ, ಅಶ್ವಥ್ ನಾರಾಯಣ್, ಯೋಗಿಶ್ವರ್ ಅವರು ಪರಸ್ಪರ ಆರೋಪ, ಪ್ರತ್ಯಾರೋಪ, ಯೂಟರ್ನ್ ಹೊಡೆದಿದ್ದ ಹೇಳಿಕೆಗಳನ್ನು ವಿಡಿಯೋ ಮೂಲಕ ತೆರೆಯ ಮೇಲೆ ಪ್ರದರ್ಶಿಸಿದ ನಂತರ ಡಿಸಿಎಂ ಶಿವಕುಮಾರ್ ಅವರು ಮಾತನಾಡಿದರು.

“ಜನ ತೀರ್ಪು ನೀಡಿದ್ದಾರೆ. ಆದ ಕಾರಣಕ್ಕೆ ಗಂಡು ಭೂಮಿ ಮಂಡ್ಯದಲ್ಲಿ ಗೆಲುವು ಕಂಡಿದ್ದೀರಿ. ಇಲ್ಲಿಗೆ ಬಂದು ನಿಮ್ಮ ತಿರುವು-ಮುರುವು ಹೇಳಿಕೆಗಳ ಬಗ್ಗೆ ಉತ್ತರ ನೀಡಬೇಕು. ನಿಮ್ಮ ಅಮೃತದ ನುಡಿಮುತ್ತುಗಳನ್ನು ಈ ನೆಲದ ಮೇಲೆ ಉದುರಿಸಬೇಕು. ಯೂಟರ್ನ್ ಕುಮಾರ, ಕ್ಷಣಕ್ಕೊಂದು ಮಾತು ಕ್ಷಣಕ್ಕೊಂದು ಬಣ್ಣ”ಎಂದು ಶಿವಕುಮಾರ್ ಅವರು ಕುಮಾರಸ್ವಾಮಿ ಅವರನ್ನು ಲೇವಡಿ ಮಾಡಿದರು.

“ಮೋದಿ ಅವರ ಕೈ ಹಿಡಿದು ಕೇವಲ ಐದು ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎಂದು ಕುಮಾರಣ್ಣ ಹೇಳಿದ್ದರು. ಆದರೆ ಈಗ ನಾವು ಐದು ಜನ ಮಂತ್ರಿಗಳಿದ್ದೇವೆ, ನಾನು ಆ ರೀತಿ ಮಾತು ಕೊಡಲು ಮೂರ್ಖನೇ ಎಂದು ಹೇಳುತ್ತಿದ್ದಾರೆ. ಈ ಹೇಳಿಕೆಗಳಿಗೆ ಬಿಜೆಪಿ ಹಾಗೂ ಕುಮಾರಸ್ವಾಮಿ ಇಬ್ಬರೂ ಉತ್ತರ ಕೊಡಬೇಕು” ಎಂದು ಆಗ್ರಹಿಸಿದರು.

“ಕುಮಾರಸ್ವಾಮಿ ಅವರನ್ನು ಕಾವೇರಿ ನೀರಿನ ವಿಚಾರದ ಸಭೆಗೆ ಕರೆದಿದ್ದೆವು. ಅದಕ್ಕೆ ಅವರು ದ್ರಾಕ್ಷಿ, ಗೋಡಂಬಿ ತಿನ್ನಲು ಬರಬೇಕೆ ಎಂದಿದ್ದರು. ಆದರೆ ಅದೇ ದಿನ ಪಾಂಡವಪುರದಲ್ಲಿ ಬಾಡೂಟದಲ್ಲಿ ಭಾಗವಹಿಸಿದ್ದರು. ಕಾವೇರಿ ನೀರು, ರೈತರು, ರಾಜ್ಯದ ಹಿತ ಅವರಿಗೆ ಮುಖ್ಯವಾಗಿರಲಿಲ್ಲ. ಕುಮಾರಣ್ಣ ಏನೂ ಬೇಕಾದರೂ ಮಾಡಿಕೊಳ್ಳಲಿ, ಆದರೆ ನಮಗೆ ಮಾತ್ರ ನಿಮ್ಮ ಹಿತ ಮುಖ್ಯ” ಎಂದರು.

ಮುಂದಿನ 10 ವರ್ಷವೂ ಕಾಂಗ್ರೆಸ್ ಸರ್ಕಾರ : “ನನ್ನ ಅಧ್ಯಕ್ಷತೆಯಲ್ಲಿ, ಸಿದ್ದರಾಮಯ್ಯ ಅವರ ಮುದಾಲತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನ. ಬಿಜೆಪಿಗೆ 65 ಜೆಡಿಎಸ್ ಗೆ 19 ಸ್ಥಾನಗಳು ಬಂದವು. ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಅವರು ಎರಡನೇ ಬಾರಿ ಸಿಎಂ ಆಗಿದ್ದಾರೆ. ನಮ್ಮ ಸರ್ಕಾರವನ್ನು ಬೀಳಿಸಲು ಆಗುವುದಿಲ್ಲ. ಮುಂದಿನ 10 ವರ್ಷವೂ ಕಾಂಗ್ರೆಸ್ ಸರ್ಕಾರವಿರುತ್ತದೆ” ಎಂದರು.

ರಾಜ್ಯದ ಬಡವರ ವಿರುದ್ಧದ ಪಾದಯಾತ್ರೆ : “ಬಿಜೆಪಿ, ಜೆಡಿಎಸ್ ಪಾದಯಾತ್ರೆ ಮಾಡುತ್ತಿರುವುದು ನನ್ನ ಹಾಗೂ ಸಿದ್ದರಾಮಯ್ಯ ಅವರ ವಿರುದ್ಧವಲ್ಲ. ಈ ರಾಜ್ಯದ ಬಡಜನರ ವಿರುದ್ದ ಪಾದಯಾತ್ರೆ ಮಾಡುತ್ತಿದ್ದಾರೆ. ಈ ರಾಜ್ಯದ ಜನ ಕಾಂಗ್ರೆಸ್ ಗೆ ಶೇ.43ರಷ್ಟು ಮತ ನೀಡಿ 136 ಸ್ಥಾನ ನೀಡಿದ್ದಾರೆ. ಮಂಡ್ಯದಲ್ಲಿ 7 ಸ್ಥಾನ ಕೊಟ್ಟಿದ್ದಾರೆ. ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ಇದನ್ನು ನಿಲ್ಲಿಸಲು ಸರ್ಕಾರ ಬೀಳಿಸುವ ಹುನ್ನಾರ ಮಾಡುತ್ತಿದ್ದಾರೆ. ಕುಮಾರಸ್ವಾಮಿ, ಯಡಿಯೂರಪ್ಪ ಅವರೇ ಸರ್ಕಾರ ಬೀಳಿಸುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ. ಅಶೋಕಣ್ಣ ನಿನ್ನ ಕೈಯಲ್ಲಿ ಧಮ್ ಇಲ್ಲ" ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News