ಮಂಡ್ಯ | ಶಿಂಷಾ ನದಿಯಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷ : ಸಾರ್ವಜನಿಕರು, ರೈತರಿಗೆ ಅರಣ್ಯ ಇಲಾಖೆ ಎಚ್ಚರಿಕೆ

Update: 2024-05-27 08:10 GMT

ಮಂಡ್ಯ: ಕಾಡಿನಿಂದ ನಾಡಿನ ಕಡೆ ಮುಖ ಮಾಡಿರುವ ಆನೆಗಳ ಹಿಂಡು ಮದ್ದೂರು ಪಟ್ಟಣದ ಹೊಳೆ ಆಂಜನೇಯ ದೇವಾಲಯದ ಬಳಿಯ ಶಿಂಷಾ ನದಿಯಲ್ಲಿ ಸೋಮವಾರ ಬೆಳ್ಳಂ ಬೆಳಗ್ಗೆ ಪ್ರತ್ಯಕ್ಷವಾಗಿವೆ.

ಆರು ಆನೆಗಳು ಗುಂಪಾಗಿ ನೀರಿನಲ್ಲಿ ಆಟವಾಡುತ್ತ ಸುತ್ತಮುತ್ತಲ ಪ್ರದೇಶದಲ್ಲಿ ತಿರುಗಾಡುತ್ತಿವೆ. ನದಿ ಅಕ್ಕಪಕ್ಕ ಇರುವ ಕಬ್ಬು, ಭತ್ತ, ಇತರೆ ಬೆಳೆಗಳನ್ನು ತಿಂದು ತುಳಿದು ನಾಶಮಾಡುತ್ತಿವೆ ಎನ್ನಲಾಗಿದೆ.

ಆನೆಗಳು ಕದಲದಂತೆ ಮುನ್ನೆಚ್ಚರಿಕೆ ವಹಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ, ಸಾರ್ವಜನಿಕರು ಮತ್ತು ರೈತರಿಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ. ಆನೆಗಳ ಹಿಂಡಿನತ್ತ ತೆರಳಬಾರದು ಹಾಗೂ ಅವುಗಳಿಗೆ ಕಿರಿಕಿರಿ ಮಾಡಬಾರದೆಂದು ಮನವಿ ಮಾಡಿದ್ದಾರೆ.

ಅರಣ್ಯ ಸಿಬ್ಬಂದಿಗಳು ಸ್ಥಳದಲ್ಲೇ ಹಾಜರಿದ್ದು ಆನೆಗಳನ್ನು ಕಾಡಿನತ್ತ ಓಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕಾಡಾನೆಗಳ ಹಿಂಡು ರಾಮನಗರದ ಕಾವೇರಿ ವನ್ಯಧಾಮದಿಂದ ಇತ್ತ ಬಂದಿವೆ ಎನ್ನಲಾಗಿದೆ. ಸಂಜೆಯ ಬಳಿಕ ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಮುಂದಾಗಿದೆ.

ಸಾರ್ವಜನಿಕರು ಆನೆಗಳನ್ನು ನೋಡಲು ನದಿ ದಂಡೆ ಪ್ರದೇಶದಲ್ಲಿ ನೆರೆದಿದ್ದು, ಮೊಬೈಲ್ ಚಿತ್ರೀಕರಣ ಮಾಡಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News