ಮಂಡ್ಯ | ಜನತಾ ದರ್ಶನಕ್ಕೆ ಅಧಿಕಾರಿಗಳು ಗೈರು : ರಾಜ್ಯ ಸರಕಾರದ ವಿರುದ್ಧ ಎಚ್‌ಡಿಕೆ ಆಕ್ರೋಶ
ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರ ಪ್ರತಿನಿಧಿಸುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ನಗರದ ಅಂಬೇಡ್ಕರ್ ಭವನದಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಸಿದ್ದಾರೆ. ಆದರೆ, ಕಾರ್ಯಕ್ರಮಕ್ಕೆ ಜಿಲ್ಲೆಯ ಸರಕಾರಿ ಅಧಿಕಾರಿಗಳು ಗೈರಾಗಿದ್ದು, ಎಚ್.ಡಿ.ಕುಮಾರಸ್ವಾಮಿ ಆಕ್ರೋಶಕ್ಕೆ ಕಾರಣವಾಗಿದೆ.
ಮೈಸೂರಿನಿಂದ ಬೆಳಗ್ಗೆ 11 ಗಂಟೆಗೆ ನಗರಕ್ಕಾಗಮಿಸಿದ ಕುಮಾರಸ್ವಾಮಿ, ನೇರವಾಗಿ ಕಾಳಿಕಾಂಭ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೂಗುಚ್ಛ ನೀಡಿ ಸ್ವಾಗತಿಸಿದರು.
ಆದರೆ, ಜನತಾ ದರ್ಶನ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಬಳಿ ಜಿಲ್ಲಾಧಿಕಾರಿ ಸೇರಿದಂತೆ ಯಾವೊಬ್ಬ ಅಧಿಕಾರಿಯೂ ಸುಳಿಯಲಿಲ್ಲ. ಭದ್ರತಾ ದೃಷ್ಟಿಯಿಂದ ಅತಿ ಹೆಚ್ಚಾಗಿಯೇ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ಮಾತ್ರ ಕಾರ್ಯಕ್ರಮಕ್ಕೆ ನಿಯೋಜಿಸಲಾಗಿತ್ತು.
ಜೆಡಿಎಸ್ ಮಾಜಿ ಶಾಸಕರು ಮತ್ತು ಮುಖಂಡರ ಜತೆ ಬೆಳಗ್ಗೆಯಿಂದ ಸಂಜೆ 5 ಗಂಟೆವರೆಗೂ ಕುಮಾರಸ್ವಾಮಿ ಜನರ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಅರ್ಜಿ ಸ್ವೀಕಾರಕ್ಕೆ ಹತ್ತಕ್ಕೂ ಹೆಚ್ಚು ಕೌಂಟರ್‌ಗಳನ್ನು ತೆರೆಯಲಾಗಿತ್ತು. ಸಾವಿರಾರು ಮಂದಿ ತಮ್ಮ ಅಹವಾಲು ಸಲ್ಲಿಸಿದರು.
ಸಾರ್ವಜನಿಕರು ತಮ್ಮ ಅಹವಾಲು ಹೇಳಿಕೊಳ್ಳಲು ಮುಗಿಬಿದ್ದರು. ಈ ಸಂದರ್ಭ ಉಂಟಾದ ನೂಕುನುಗ್ಗಲನ್ನು ಪೊಲೀಸರು ಮತ್ತು ಜೆಡಿಎಸ್ ಮುಖಂಡರು ನಿಯಂತ್ರಿಸಿದರು. ಊಟಕ್ಕೂ ಬಿಡುವು ತೆಗೆದುಕೊಳ್ಳದೆ ಕುಮಾರಸ್ವಾಮಿ ಜನರ ಅಹವಾಲು ಸ್ವೀಕರಿಸಿದರು. ಅಲ್ಲಿಯೇ ಉಪಹಾರ ಸೇವಿಸಿದರು.
ರಾಜ್ಯ ಸರಕಾರದ ವಿರುದ್ಧ ಎಚ್‌ಡಿಕೆ ಆಕ್ರೋಶ :
ಜನತಾ ದರ್ಶನ ಕಾರ್ಯಕ್ರಮಕ್ಕೆ ಸರಕಾರಿ ಅಧಿಕಾರಿಗಳು ಗೈರಾಗಿದ್ದಕ್ಕೆ ಸಿಡಿಮಿಡಿಗೊಂಡ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಸರಕಾರ ತನ್ನ ಸಣ್ಣತನ ಪ್ರದರ್ಶನ ಮಾಡಿದೆ ಎಂದು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಜಿಲ್ಲಾಧಿಕಾರಿಗಳಿಗೆ ಮೂರುದಿನ ಮೊದಲೇ ನಾನು ಮನವಿ ಮಾಡಿದ್ದೆ. ಆದರೆ, ಜನತಾ ದರ್ಶನ ಕಾರ್ಯಕ್ರಮಕ್ಕೆ ಹಾಜರಾಗದಂತೆ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿ, ಅಧಿಕಾರಿಗಳು ಹೋಗಬಾರದೆಂದು ಸೂಚಿಸಿದೆ ಎಂದು ಅವರು ಕಿಡಿಕಾರಿದರು.
ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗಷ್ಟೇ ಜನತಾ ದರ್ಶನ ಮಾಡುವ ಅಧಿಕಾರವಿದೆ ಎಂದು ರಾಜ್ಯ ಸರಕಾರ ಗುರುವಾರ ಕ್ಯಾಬಿನೆಟ್ ಸಭೆ ನಡೆಸಿ, ಸುತ್ತೋಲೆ ಹೊರಡಿಸಿರುವುದು ಸಣ್ಣತನದ ಪ್ರದರ್ಶನವಾಗಿದೆ ಎಂದು ಅವರು ಅವರು ವಾಗ್ದಾಳಿ ನಡೆಸಿದರು.
ಇದೇನು ನನ್ನ ಮನೆಯ ಕೆಲಸವಲ್ಲ. ಸರಕಾರಿ ಕಾರ್ಯಕ್ರಮ ಅಲ್ಲದಿದ್ದರೂ ಕೇಂದ್ರದ ಮಂತ್ರಿಯಾಗಿ ಜನರ ಸಮಸ್ಯೆ ಕೇಳಲು ಬಂದಿದ್ದೇನೆ. ಅಧಿಕಾರಿಗಳು ಇಲ್ಲದಿದ್ದರೂ ಸಂಜೆವರೆಗೂ ಜನರ ಕಷ್ಟಸುಖ ಆಲಿಸಿ ಬಗೆಹರಿಸುವ ಯತ್ನ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಶಾಸಕರಾದ ಸಿ.ಎನ್.ಮಂಜುನಾಥ್, ಎಚ್.ಟಿ.ಮಂಜು, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ, ಮಾಜಿ ಶಾಸಕರಾದ ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಕೆ.ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.