ಮೇಕೆದಾಟು ಯೋಜನೆಗೆ ಎಚ್‌.ಡಿ.ಕುಮಾರಸ್ವಾಮಿ ಅನುಮತಿ ಕೊಡಿಸಲಿ : ಸಿಎಂ ಸಿದ್ದರಾಮಯ್ಯ ಆಗ್ರಹ

Update: 2024-07-29 12:59 GMT

ಮಂಡ್ಯ : ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾದ ಮೇಕೆದಾಟು ಅಣೆಕಟ್ಟು ನಿರ್ಮಿಸಲು ಕೇಂದ್ರ ಸಚಿವ ಹಾಗೂ ಮಂಡ್ಯ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರಕಾರದಿಂದ ಅನುಮತಿ ಕೊಡಿಸುವ ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯಕ್ಕೆ ಸೋಮವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಎಷ್ಟೇ ಮನವಿ ಮಾಡಿದರೂ ಕೇಂದ್ರ ಸರಕಾರ ಇದುವರೆಗೂ ಮೇಕೆದಾಟು ಯೋಜನೆಗೆ ಮಂಜೂರಾತಿ ಕೊಟ್ಟಿಲ್ಲ. ಇದನ್ನು ಕೇಳಿದರೆ ವಿರೋಧ ಪಕ್ಷದವರು ನಮ್ಮ ಮೇಲೆ ಏರಿ ಬರುತ್ತಾರೆ ಎಂದು ಕಿಡಿಕಾರಿದರು.

ಮೇಕೆದಾಟು ಅಣೆಕಟ್ಟೆ ನಿರ್ಮಾಣವಾದರೆ ತಮಿಳುನಾಡಿಗೇ ಹೆಚ್ಚು ಉಪಯೋಗವಾಗುತ್ತದೆ. ಆದರೆ, ಈ ವಿಚಾರದಲ್ಲಿ ತಮಿಳುನಾಡು ಸರಕಾರ ಮತ್ತೆ ಮತ್ತೆ ಕ್ಯಾತೆ ತೆಗೆಯುತ್ತದೆ. ಅನಗತ್ಯ ತಕರಾರು ಮಾಡುತ್ತಾರೆ. ಮೇಕೆದಾಟು ಅಣೆಕಟ್ಟು ನಿರ್ಮಾಣವಾಗುತ್ತಿರುವುದು ನಮ್ಮ ರಾಜ್ಯದಲ್ಲಿ. ಹಾಗಾಗಿ ಈ ಯೋಜನೆ ನಮ್ಮ ಹಕ್ಕು ಎಂದು ಅವರು ಪ್ರತಿಪಾದಿಸಿದರು.

ಮೇಕೆದಾಟು ಅಣೆಕಟ್ಟಿನಲ್ಲಿ 65 ಟಿಎಂಸಿ ಅಡಿ ನೀರು ಸಂಗ್ರಹ ಮಾಡಬಹುದು. ಇದರಲ್ಲಿ ವಿದ್ಯುತ್ ಉತ್ಪಾದನೆ, ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಒದಗಿಸಿ, ಉಳಿದ ನೀರನ್ನು ಮಳೆ ಕಡಿಮೆಯಾದ ಸಂಕಷ್ಟದ ವರ್ಷಗಳಲ್ಲಿ ತಮಿಳುನಾಡಿಗೆ ನ್ಯಾಯ ಮಂಡಳಿ ಆದೇಶದಲ್ಲಿ ನೀಡಿರುವಷ್ಟು ನೀರನ್ನು ಹರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾವೇರಿ ನ್ಯಾಯ ಮಂಡಳಿ ತೀರ್ಪಿನ ಪ್ರಕಾರ ಕಾವೇರಿಕೊಳ್ಳದ ನಮ್ಮ ರಾಜ್ಯದ ನಾಲ್ಕು ಜಲಾಶಯಗಳು ತುಂಬಿದ್ದಾಗ 177.25 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸಬೇಕು. 2022-23ರಲ್ಲಿ 665 ಟಿಎಂಸಿ ಅಡಿ ಹರಿದಿದ್ದು, ಈ ವರ್ಷ ಇದುವರೆಗೆ ಸುಮಾರು 83 ಟಿಎಂಸಿ ಅಡಿ ಹರಿದು ಹೋಗಿದೆ. ಮಳೆ ಮುಂದುವರೆದರೆ ಮತ್ತಷ್ಟು ಹರಿಯಲಿದೆ ಎಂದು ಅವರು ಮಾಹಿತಿ ನೀಡಿದರು.

ಮೇಕೆದಾಟು ಯೋಜನೆ, ಕೇಂದ್ರ ಬಜೆಟ್‍ನಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ ಸೇರಿದಂತೆ ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯಗಳ ವಿರುದ್ಧ ರಾಜ್ಯದ ಬಿಜೆಪಿ-ಜೆಡಿಎಸ್ ಸಂಸದರು ಮಾತನಾಡುತ್ತಿಲ್ಲ. ಬದಲಾಗಿ ಕ್ಷುಲ್ಲಕ ವಿಚಾರಗಳನ್ನು ಮಾತ್ರ ಮಾತನಾಡುತ್ತಾರೆ. ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಒಟ್ಟು 10 ದಿನಗಳ ವಿಧಾನಮಂಡಲದ ಅಧಿವೇಶನದಲ್ಲಿ ಸಂಪೂರ್ಣ 8 ದಿನ ಅಧಿವೇಶನವನ್ನು ಹಾಳು ಮಾಡುವುದಕ್ಕಾಗಿಯೇ ಬಳಕೆ ಮಾಡಿಕೊಂಡರು. ಇದರಿಂದ ರಾಜ್ಯದ ನೆರೆ ಸಮಸ್ಯೆ, ರೈತರ ಸಮಸ್ಯೆ, ಮಹದಾಯಿ, ಕೃಷ್ಣ ಮೇಲ್ದಂಡೆ ಯೋಜನೆ, ಇತರೆ ಗಂಭೀರ ವಿಷಯಗಳು ಬಗ್ಗೆ ಧ್ವನಿಯೆತ್ತದೇ ತಪ್ಪಿಸಿಕೊಂಡರು ಎಂದು ಅವರು ವಾಗ್ದಾಳಿ ನಡೆಸಿದರು.

ರಾಜ್ಯದ ಜನತೆ 136 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಕಾಂಗ್ರೆಸ್ ಸರಕಾರ ರಚನೆಗೆ ಆಶೀರ್ವಾದ ಮಾಡಿದ್ದಾರೆ. ಕ್ಷುಲ್ಲಕ ವಿಚಾರ, ಸುಳ್ಳು ವಿಚಾರಗಳನ್ನು ಇಟ್ಟುಕೊಂಡು ನಮ್ಮ ಸರಕಾರವನ್ನು ದುರ್ಬಲಗೊಳಿಸುವ ಯತ್ನ ಮಾಡುತ್ತಿದ್ದಾರೆ. ಆದರೆ, ರಾಜ್ಯದ ಜನ ರಾಜಕೀಯವಾಗಿ ಬುದ್ಧಿವಂತರಿದ್ದಾರೆ. ಯಾವುದು ಸುಳ್ಳು, ಯಾವುದು ಸತ್ಯ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಅವರು ತಿರುಗೇಟು ನೀಡಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಸದ್ಯದಲ್ಲೇ ಮಂಡ್ಯದಲ್ಲಿ ಕೃಷಿ ವಿವಿ ಸ್ಥಾಪನೆಯಾಗಲಿದೆ. ಕೆಆರ್‌ಎಸ್ ಬೃಂದಾವನ ಉದ್ಯಾನದ ಅಭಿವೃದ್ಧಿಗಾಗಿ ಯೋಜನೆ ರೂಪಿಸಿ ಅನುಮೋದನೆಯಾಗಿದೆ. ರೈತರಿಂದ ಜಮೀನನ್ನು ಪಡೆಯದೆ ಸರಕಾರದಲ್ಲಿರುವ ಜಮೀನಿನಲ್ಲೇ ಆಣೆಕಟ್ಟೆಯ ಭದ್ರತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಯೋಜನೆ ಮಾಡಲಾಗಿದೆ ಎಂದರು.

ವೇದಿಕೆಯಲ್ಲಿ ಸಚಿವರಾದ ಎನ್.ಚಲುವರಾಯಸ್ವಾಮಿ, ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News