ಕಣ್ಸನ್ನೇ, ಕೈಸನ್ನೇ ಮೂಲಕ ಜೆಡಿಎಸ್ ಸದಸ್ಯರಿಗೆ ಕಾಂಗ್ರೆಸ್‌ ಶಾಸಕನಿಂದ ಹಣದ ಆಮಿಷ : ಎಚ್‌ಡಿಕೆ ಆರೋಪ

Update: 2024-08-28 13:23 GMT

ಮಂಡ್ಯ : ಇಲ್ಲಿನ ನಗರಸಭೆ ಚುನಾವಣೆ ಮತದಾನದ ವೇಳೆಯಲ್ಲೇ ಚುನಾವಣಾಧಿಕಾರಿ ಸಮಕ್ಷಮದಲ್ಲಿಯೇ ಸ್ಥಳೀಯ ಶಾಸಕರು ನಮ್ಮ ಪಕ್ಷದ ಸದಸ್ಯರಿಗೆ ಅಡ್ಡ ಮತದಾನಕ್ಕೆ ಕುಮ್ಮಕ್ಕು ನೀಡಿ ಕಣ್ಸನ್ನೇ, ಕೈಸನ್ನೇ ಮೂಲಕ ಹಣದ ಆಮಿಷವೊಡ್ಡಿದರು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಂತರ, ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾವು ವಾಮಮಾರ್ಗದಲ್ಲಿ ಅಧಿಕಾರ ಹಿಡಿದಿದ್ದೇವೆ ಎಂದು ಶಾಸಕ ರವಿಕುಮಾರ್ ಆರೋಪಿಸಿದ್ದಾರೆ. ವಾಮಮಾರ್ಗದ ಅರ್ಥವೇನು? ಮತದಾನದ ವೇಳೆಯಲ್ಲಿಯೂ ಕಣ್ಸನ್ನೇ, ಕೈಸನ್ನೇ ಮೂಲಕ ನಮ್ಮ ಸದಸ್ಯರಿಗೆ ಹಣದ ಆಮಿಷವೊಡ್ಡಿದ್ದು ವಾಮಮಾರ್ಗ ಅಲ್ಲದೆ ಮತ್ತೇನು? ಎಂದು ತಿರುಗೇಟು ನೀಡಿದರು.

ನನ್ನ ಜೀವನದಲ್ಲಿ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಮತ ಹಾಕಲು ಬಂದಿದ್ದೇನೆ. ಕಳೆದ 20 ದಿನಗಳಿಂದ ನಡೆದ ರಾಜಕೀಯ ಬೆಳವಣಿಗೆ ಗಮನಿಸಿ ನಾನು ಬರಲೇಬೇಕಾಯಿತು. ದೆಹಲಿಯಲ್ಲಿ ಸಚಿವ ಸಂಪುಟದ ಸಭೆ ನಿಗದಿ ಆಗಿತ್ತು. ನಾನು ಪ್ರಧಾನಮಂತ್ರಿಗಳ ಕಚೇರಿಯ ಅನುಮತಿ ಪಡೆದು ಮತದಾನದಲ್ಲಿ ಭಾಗವಹಿಸಿದೆ ಎಂದು ಅವರು ಹೇಳಿದರು.

ಶಾಂತಿಯುತವಾಗಿ ಚುನಾವಣೆ ನಡೆಯಲು ಅಧಿಕಾರಿಗಳು ಸಹಕರಿಸಿದ್ದಾರೆ. ಸೋಲಿನ ಭಯದಲ್ಲಿ ಚುನಾವಣೆ ಮುಂದೂಡುವುದರಲ್ಲಿ ಕಾಂಗ್ರೆಸ್ ಎಕ್ಸ್‌ ಪರ್ಟ್. ಏನಾದರೂ ಕಿತಾಪತಿ ಮಾಡುವುದಕ್ಕೆ ಕಾಂಗ್ರೆಸ್ ನಾಯಕರು ಪ್ರಯತ್ನ ಮಾಡಿದರು ಎಂದು ಅವರು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News