ಎಚ್.ಡಿ.ಕುಮಾರಸ್ವಾಮಿ ಅವರ ಬೆನ್ನಿಗೆ ಬಿಜೆಪಿ ನಿಲ್ಲಲಿದೆ : ಆರ್.ಅಶೋಕ್

Update: 2024-08-22 15:19 GMT

PC : x/@RAshokaBJP

ಮಂಡ್ಯ : ಕಾಂಗ್ರೆಸ್ ಸರಕಾರ ಎಚ್.ಡಿ.ಕುಮಾರಸ್ವಾಮಿ ಕುಟುಂಬದ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದ್ದು, ಎನ್‍ಡಿಎ ಭಾಗವಾಗಿರುವ ಕುಮಾರಸ್ವಾಮಿ ಅವರ ಬೆನ್ನಿಗೆ ಬಿಜೆಪಿ ನಿಲ್ಲಲಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಗುರುವಾರ ನಗರದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ವಿರುದ್ಧ ನಡೆದ ಪ್ರತಿಭಟನೆ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ದ್ವೇಷದ ಭಾಗವಾಗಿಯೇ ಎಚ್.ಡಿ.ರೇವಣ್ಣ, ಅವರ ಮಕ್ಕಳನ್ನು ಜೈಲಿಗೆ ಹಾಕಲಾಯಿತು. ರೇವಣ್ಣ ಪತ್ನಿಯನ್ನೂ ಜೈಲಿಗೆ ಕಳುಹಿಸುವ ಹುನ್ನಾರ ನಡೆದಿತ್ತು ಎಂದರು.

ಕಾಂಗ್ರೆಸ್ ಸರಕಾರ ಭ್ರಷ್ಟ ಸರಕಾರವೆಂಬುದು ಇಡೀ ರಾಜ್ಯದ ಜನರ ಮನಸ್ಸಿನಲ್ಲಿ ಉಳಿದುಬಿಟ್ಟಿದ್ದು, ಅದನ್ನು ನಿರಾಕರಿಸಲು ಸಾಧ್ಯವಿಲ್ಲ. ತಾವು ಮಾಡಿರುವುದು ಪ್ರಮಾದವೆಂದು ಅರಿವಿಗೆ ಬಂದಿರುವುದರಿಂದ ಸಿದ್ದರಾಮಯ್ಯ ಸಿಎಲ್‍ಪಿ ಸಭೆಗೆ ದೆಹಲಿಗೆ ಹೋಗುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಮುಡಾ ವಿಚಾರದಲ್ಲಿ ಕಾನೂನು ತಜ್ಞರ ಜತೆ ಚರ್ಚಿಸಿಯೇ ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿರುವುದು. ವಿಪಕ್ಷವಾಗಿ ಸರಕಾರದ ತಪ್ಪುಗಳ ವಿರುದ್ಧ ಹೋರಾಡುವುದು ವಿಪಕ್ಷವಾದ ಬಿಜೆಪಿಯ ಕರ್ತವ್ಯ, ಸರಕಾರಕ್ಕೆ ಜೈಕಾರ ಹಾಕುವುದಲ್ಲ ಎಂದು ಅವರು ಕಿಡಿಕಾರಿದರು.

ಯಾರನ್ನು ಜೈಲಿಗೆ ಕಳುಹಿಸಬೇಕು, ಯಾರಿಗೆ ಬೇಲ್ ಕೊಡಬೇಕು ಎಂದು ನಿರ್ಧರಿಸುವುದು ನ್ಯಾಯಾಂಗ ವ್ಯವಸ್ಥೆ. ಆ ಅಧಿಕಾರ ಸಿದ್ದರಾಮಯ್ಯ ಅವರಿಗೆ ಇಲ್ಲ. ಎಚ್.ಡಿ.ಕುಮಾರಸ್ವಾಮಿ ಅವರಿಗೂ ಇಲ್ಲ ಎಂದು ಅವರು ಪ್ರತಿಕ್ರಿಯಿಸಿದರು.

ಕಾಂಗ್ರೆಸ್‍ನವರು ರಾಜ್ಯಪಾಲರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಅವಮಾನ ಮಾಡಿರುವುದು ದಲಿತರಿಗೆ ಮಾಡುತ್ತಿರುವ ಅವಮಾನ. ಕಾಂಗ್ರೆಸ್ ಪಕ್ಷ ಕೂಡಲೆ ರಾಜ್ಯಪಾಲರಲ್ಲಿ ಕೂಡಲೇ ಕ್ಷಮೆ ಕೇಳಬೇಕು ಎಂದು ಅವರು ಪ್ರತಿಭಟನೆ ವೇಳೆ ಒತ್ತಾಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಅಶೋಕ್ ಜಯರಾಂ, ಕೆ.ಎಸ್.ನಂಜುಂಡೇಗೌಡ, ಎಸ್.ಪಿ.ಸ್ವಾಮಿ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News