ಅಭ್ಯರ್ಥಿಗಳನ್ನು ಘೋಷಣೆ ಮಾಡಲು ಜೆಡಿಎಸ್ ವರಿಷ್ಠರು ಸ್ವಾತಂತ್ರ್ಯ ಕಳೆದುಕೊಂಡಿರುವುದು ವಿಪರ್ಯಾಸ : ಸಚಿವ ಚಲುವರಾಯಸ್ವಾಮಿ

Update: 2024-03-20 14:30 GMT

ಮಂಡ್ಯ: ಹಾಸನ ಹಾಗೂ ಮಂಡ್ಯದಲ್ಲೂ ಅಭ್ಯರ್ಥಿ ಘೋಷಣೆ ಮಾಡಲು ಜೆಡಿಎಸ್ ವರಿಷ್ಠರು ಸ್ವಾತಂತ್ರ್ಯ ಕಳೆದುಕೊಂಡಿರುವುದು ವಿಪರ್ಯಾಸ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.

ನಗರದ ಬಂದೀಗೌಡ ಬಡಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಅವರ ನಿವೇಶನ ಗೃಹಪ್ರವೇಶ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯೊಂದಿಗೆ ಹೋಗಿ ತಪ್ಪು ಮಾಡಿರುವ ಬಗ್ಗೆ ಜೆಡಿಎಸ್ ವರಿಷ್ಠರಿಗೆ ಈಗ ಅರಿವಾಗಿದೆ. ಜೆಡಿಎಸ್ ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ಪಕ್ಷ ಗೌರವಯುತವಾಗಿ ನಡೆಸಿಕೊಂಡಿದೆ ಎಂದು ಅವರು ಹೇಳಿದರು.

ದೇವೇಗೌಡರ ಸ್ವಂತ ಅಳಿಯ ಡಾ.ಮಂಜುನಾಥ್ ಅವರನ್ನು ಬೆಂಗಳೂರು ಗ್ರಾಮಾಂತರದಿಂದ ಬಿಜೆಪಿ ಪಕ್ಷದ ಚಿಹ್ನೆಯಲ್ಲಿ ಕಣಕ್ಕಿಳಿಸುತ್ತಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿ ಜೆಡಿಎಸ್‍ಗೆ ಬರಬಾರದಿತ್ತು. ಇದರಿಂದ ಅವರ ಆತ್ಮವಿಶ್ವಾಸ ಕುಗ್ಗಿದೆ ಎಂಬುದು ತಿಳಿಯುತ್ತದೆ ಎಂದು ಅವರು ಟೀಕಿಸಿದರು.

ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ನಾಯಕರನ್ನು ಬಿಜೆಪಿ ಕಡೆಗಣಿಸಿದೆ. ಹಾಲಿ ಸಂಸದ, ಹಿರಿಯ ನಾಯಕ ಸದಾನಂದಗೌಡ ಅವರು ತನ್ನ ನಿಲುವನ್ನು ಕೆಲವೇ ದಿನಗಳಲ್ಲಿ ತಿಳಿಸಲಿದ್ದಾರೆ ಎಂದು  ಹೇಳಿದರು.

ಮಂಡ್ಯ ಸೇರಿದಂತೆ ಕನಿಷ್ಠ 20 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಎ.1ರಂದು ನಮ್ಮ ಅಭ್ಯರ್ಥಿ ಸ್ಟಾರ್ ಚಂದ್ರು ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಾಗೂ 8 ತಿಂಗಳ ಅಭಿವೃದ್ಧಿ ಕೆಲಸಗಳು ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು), ಶಾಸಕರಾದ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಪಿ.ಎಂ.ನರೇಂದ್ರಸ್ವಾಮಿ, ಪಿ.ರವಿಕುಮಾರ್ ಗಣಿಗ, ಕೆ.ಎಂ.ಉದಯ, ದಿನೇಶ್ ಗೂಳಿಗೌಡ, ಮರಿತಿಬ್ಬೇಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಎಚ್.ಬಿ.ರಾಮು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಇತರ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News