ಮಂಡ್ಯ | ಕೊಲ್ಕತ್ತಾ ವೈದ್ಯೆ ಅತ್ಯಾಚಾರ, ಹತ್ಯೆ ಖಂಡಿಸಿ ವೈದ್ಯರ ಪ್ರತಿಭಟನೆ

Update: 2024-08-17 13:28 GMT

ಮಂಡ್ಯ : ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಲ್ಲಿ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿರುವ ಕೃತ್ಯ ಖಂಡಿಸಿ ರಾಷ್ಟ್ರವ್ಯಾಪಿ ಹೊರರೋಗಿ ವಿಭಾಗ(ಒಪಿಡಿ) ಬಂದ್ ಕರೆ ಹಿನ್ನೆಲೆಯಲ್ಲಿ ಶನಿವಾರ ಮಂಡ್ಯದಲ್ಲಿ ಒಪಿಡಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.

ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗ ಬಂದ್ ಮಾಡಿ ನಗರದ ಮಿಮ್ಸ್ ಆವರಣದಿಂದ ಮೆರವಣಿಗೆ ಹೊರಟ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಕೊಲ್ಕತ್ತಾದ ಆರ್.ಜಿ.ಕರ್ ಮೆಡಿಕಲ್ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಸ್ನಾತಕೋತ್ತರ ವ್ಯೆದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಗೈದಿರುವುದು ಅಮಾನುಷ ಕೃತ್ಯವಾಗಿದ್ದು, ವೈದ್ಯಕೀಯ ಸಮೂಹವನ್ನು ಅಘಾತಕ್ಕೀಡು ಮಾಡಿದೆ ಎಂದು ಆತಂಕ ಅವರು ಆತಂಕ ವ್ಯಕ್ತಪಡಿಸಿದರು.

ಪ್ರಕರಣ ಕುರಿತಂತೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪೊಲೀಸರು ಸಮರ್ಪಕವಾಗಿ ತನಿಖೆ ನಡೆಸಿಲ್ಲ. ಈ ಬಗ್ಗೆ ಅಸಮಾಧಾನ ಸೂಚಿಸಿರುವ ಕೊಲ್ಕತ್ತಾ ಹೈಕೋರ್ಟ್ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಿದ್ದು, ಪೊಲೀಸರ ವೈಫಲ್ಯವನ್ನು ತೋರ್ಪಡಿಸಿದೆ ಎಂದು ಅವರು ಟೀಕಿಸಿದರು.

ಸ್ವಾತಂತ್ರ್ಯೋತ್ಸವ ದಿನದಂದು ದುಷ್ಕರ್ಮಿಗಳ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿ ಸಾಕ್ಷ್ಯನಾಶ ಮಾಡಲು ಮುಂದಾಗಿದ್ದಾರೆ. ಅಲ್ಲದೆ ಪ್ರತಿಭಟನಾ ನಿರತ ಕಿರಿಯ ವೈದ್ಯಾಧಿಕಾರಿಗಳ ಮೇಲೆ ದಾಳಿ ಮಾಡಿ ದೌರ್ಜನ್ಯ ಮಾಡಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯ ಸರಕಾರ ಪ್ರಕರಣ ಕುರಿತು ಸಂಪೂರ್ಣ ನಿರ್ಲಕ್ಷ್ಯ ತೋರಿದೆ ಎಂದು ಅವರು ಆರೋಪಿಸಿದರು.

ವ್ಯೆದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ಟಿ.ಎನ್.ಮರೀಗೌಡ, ಡಾ.ಗೋಪಾಲಕೃಷ್ಣ, ಗುಪ್ತ, ಡಾ.ವಿನಯ್, ಡಾ.ವಸುಮತಿ ಎಸ್.ರಾವ್, ಡಾ.ಮಂಜುನಾಥ್, ಡಾ.ಯೋಗೇಂದ್ರಕುಮಾರ್, ಡಾ.ಜಗದೀಶ್ ಕುಮಾರ್, ಡಾ.ಮೋಹನ್‍ಕುಮಾರ್, ಡಾ.ಜಾಹ್ನವಿ, ಡಾ.ಶೀತಲ್, ಡಾ.ಬಿಂದ್ಯ, ಡಾ.ಅಶ್ವಿನಿ, ಡಾ.ಆಶಾಲತಾ ನೇತೃತ್ವ ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News