ಮಂಡ್ಯ | ವರದಕ್ಷಿಣೆ ಕಿರುಕುಳ ಆರೋಪ: ಗೃಹಿಣಿ ಆತ್ಮಹತ್ಯೆ

Update: 2024-03-22 13:36 GMT

ಮಂಡ್ಯ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬರು ಡೆತ್‍ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಹೋಬಳಿ ಲಿಂಗಾಪುರ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ವರದಿಯಾಗಿದೆ.

ಲಿಂಗಾಪುರ ಗ್ರಾಮದ ಪ್ರೇಮಕುಮಾರಿ(26) ಮಾ.20ರಂದು ತನ್ನ ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಆಕೆಯ ತಂದೆ ರಾಜೇಂದ್ರ ಪುತ್ರಿಯ ಗಂಡ ಮತ್ತು ಅವರ ಮನೆಯವರ ವಿರುದ್ಧ ಕಿಕ್ಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರೇಮಕುಮಾರಿ ಪತಿ ಮೈಸೂರಿನ ಎನ್.ಆರ್.ಮೊಹಲ್ಲಾ ನಿವಾಸಿ ರಾಘವೇಂದ್ರ, ಆತನ ತಂದೆ ಕುಮಾರಸ್ವಾಮಿ, ತಾಯಿ ಅರುಣ, ಅಕ್ಕ ರಂಜಿತಾ, ಭಾವ ಯತೀಶ, ಸಂಬಂಧಿಗಳಾದ ಉಮೇಶ ಮತ್ತು ಕೊಟ್ರೇಶ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

2022 ಮಾರ್ಚ್ 6 ರಂದು 150 ಗ್ರಾಂ ಚಿನ್ನಾಭರಣ, 5 ಲಕ್ಷ ರೂ. ವರದಕ್ಷಿಣೆ ನೀಡಿ ರಾಘವೇಂದ್ರನಿಗೆ ಮಗಳನ್ನು ಮದುವೆ ಮಾಡಲಾಗಿತ್ತು. ಮದುವೆಯಾದ ಆರು ತಿಂಗಳ ನಂತರ, ಅಳಿಯ ಮತ್ತು ಮನೆಯವರು ನನ್ನ ಮಗಳಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಪ್ರೇಮಕುಮಾರಿ ತಂದೆ ದೂರಿನಲ್ಲಿ ಆರೋಪಿಸಿದ್ದಾರೆ.

ಕಿರುಕುಳ ತಾಳಲಾರದೆ ಮಗಳು ನಮ್ಮ ಮನೆಗೆ ಬಂದಿದ್ದಳು. ನ್ಯಾಯ ಪಂಚಾಯಿತಿ ಮಾಡಿದರೂ ಪತಿ ಮನೆಯವರು ಕರೆದುಕೊಂಡು ಹೋಗಲಿಲ್ಲ. ನಮ್ಮ ಮನೆಯಲ್ಲೇ ಇದ್ದುಕೊಂಡು ಕಾನೂನು ಕಾಲೇಜಿಗೆ ಮಗಳು ಸೇರಿಕೊಂಡಿದ್ದಳು. ಅಲ್ಲಿಗೂ ಹೋಗಿ ಕೊಲೆ ಬೆದರಿಕೆ ಹಾಕುತ್ತಿದ್ದರು. ಹಾಗಾಗಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಾಜೇಂದ್ರ ದೂರಿದ್ದಾರೆ.

ತನಗೆ ಗಂಡ ಮತ್ತು ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪ್ರೇಮಕುಮಾರಿ ಡೆತ್‍ನೋಟ್‍ನಲ್ಲಿ ಆರೋಪಿಸಿದ್ದಾರೆ ಎಂದು ಹೇಳಲಾಗಿದೆ.

ಈ ಸಂಬಂಧ ಕಿಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News