ಮಂಡ್ಯ | ಚೀರನಹಳ್ಳಿಯಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ: ಆರೋಪ

Update: 2024-03-09 10:54 GMT

ಮಂಡ್ಯ: ಸುಮಾರು 800 ವರ್ಷಗಳ ಇತಿಹಾಸವುಳ್ಳ ತಾಲೂಕಿನ ಚೀರನಹಳ್ಳಿ ಗ್ರಾಮದ ಶ್ರೀ ಬೀರೇಶ್ವರ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ವಕೀಲ, ಸಾಮಾಜಿಕ ಕಾರ್ಯಕರ್ತ ಲಕ್ಷ್ಮಣ್ ಚೀರನಹಳ್ಳಿ ಆರೋಪಿಸಿದ್ದು, ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ಸವರ್ಣೀಯರ ಮುಖಂಡರಿಗೆ ಮೂರು ದಿನಗಳ ಗಡುವು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ತಾರತಮ್ಯ ಸರಿಪಡಿಸಲು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಮೂರು ದಿನಗಳ ಕಾಲಾವಕಾಶ ನೀಡಲಾಗುವುದು ಎಂದು ಗ್ರಾಮದ ಒಕ್ಕಲಿಗ, ಕುರುಬ ಮತ್ತು ಬೆಸ್ತ ಸಮುದಾಯಗಳ ಮುಖಂಡರಿಗೆ ತಿಳಿಸಲಾಗಿದೆ. ಒಂದು ವೇಳೆ ಹಾಗೆ ಆಗದಿದ್ದರೆ ಕಾನೂನು ಹೋರಾಟಕ್ಕೆ ಚೀರನಹಳ್ಳಿಯ ದಲಿತ ಸಮುದಾಯವು ತೀರ್ಮಾನಿಸಿದೆ ಎಂದು ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಬೀರೇಶ್ವರ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ಆರು ತಿಂಗಳ ಹಿಂದೆ ಮುಜರಾಯಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ತಕ್ಷಣವೇ ಅಧಿಕಾರಿಗಳ ಮೂಲಕ ಜಾತಿ, ಧರ್ಮಗಳ ತಾರತಮ್ಯವಿಲ್ಲದೆ ದೇವಸ್ಥಾನಕ್ಕೆ ಪ್ರವೇಶ ಇದೆ ಎಂಬ ಬೋರ್ಡ್ ಹಾಕಿಸಲಾಗಿತ್ತು. ಆದರೆ, ಕಿಡಿಗೇಡಿಗಳು ಕಳೆದ ವಾರ ಬೋರ್ಡ್ ಕಿತ್ತು ಬಿಸಾಕಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.

ಕಳೆದ ವರ್ಷ ಶ್ರೀ ಬೀರೇಶ್ವರ ದೇವಸ್ಥಾನದ ನವೀಕರಣಕ್ಕೆ ಮುಜರಾಯಿ ಇಲಾಖೆಯಿಂದ ಅನುಮತಿಯನ್ನೇ ಪಡೆಯದೆ, ಎಲ್ಲಾ ಜಾತಿಯವರ ಮನೆಯಿಂದ ತಲಾ ಒಂದು ಸಾವಿರ ರೂ. ಗಳನ್ನು ಪಡೆದು ಕೊಂಡಿದ್ದಾರೆ. ದೇವಸ್ಥಾನಕ್ಕೆ ದಲಿತರ ಹಣಬೇಕು. ಆದರೆ, ಅವರಿಗೆ ದೇವಸ್ಥಾನ ಪ್ರವೇಶ ಮಾತ್ರ ನಿಷಿದ್ಧ. ಇದೆಂತಹ ಅನ್ಯಾಯ? ಎಂದು ಅವರು ಪ್ರಶ್ನಿಸಿದ್ದಾರೆ.

ಇದೇ ಮಾ.23 ರಿಂದ 25ರವರೆಗೆ ಚೀರನಹಳ್ಳಿಯಲ್ಲಿ ದೊಡ್ಡ ಹಬ್ಬ ಮಾಡಲು ದಲಿತ ಕುಟುಂಬದವರೂ ತಲಾ 2,500 ರೂ.ಗಳನ್ನು ಕೊಡಬೇಕು ಎಂದು ಸವರ್ಣಿಯರು ಫರ್ಮಾನು ಹೊರಡಿಸಿದ್ದಾರೆ. ದೇವಸ್ಥಾನದಲ್ಲಿ ಎಲ್ಲರಂತೆ ನಮಗೂ ಸಮಾನವಾಗಿ ಅವಕಾಶ ಮತ್ತು ತಾರತಮ್ಯವಿಲ್ಲದೆ ಪೂಜೆ ಮಾಡಿಸಲು ಅವಕಾಶ ಕೊಟ್ಟರೆ ಮಾತ್ರ ನಾವು ಹಣ ಕೊಡುತ್ತೇವೆ. ಇಲ್ಲದಿದ್ದರೆ ಕೊಡುವುದು ಬೇಡ ಎಂದು ಪರಿಶಿಷ್ಟ ಜಾತಿ ಮುಖಂಡರು ಮತ್ತು ನಿವಾಸಿಗಳ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಾಗೆಯೇ ಸಮಸ್ಯೆ ಬಗೆಹರಿಸಲು ಸವರ್ಣೀಯರಾದ ಒಕ್ಕಲಿಗ, ಕುರುಬ, ಬೆಸ್ತ ಸಮುದಾಯದ ಮುಖಂಡರಿಗೆ ಮೂರು ದಿನಗಳ ಅವಕಾಶ ನೀಡಲಾಗಿದ್ದು, ಬಗೆಹರಿಸದಿದ್ದರೆ ಕಾನೂನು ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಮನುಷ್ಯನ ಘನತೆಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಮುಖ್ಯವಾಗಿ ಜಿಲ್ಲೆಯ ಒಕ್ಕಲಿಗ ಮತ್ತು ಕುರುಬ ಸಮುದಾಯದ ಪ್ರಗತಿಪರರು ಹಾಗೂ ಮಾನವ ಹಕ್ಕುಗಳ ಪರ ಇರುವ ಸಂಘಟನೆಗಳು, ಹೋರಾಟಗಾರರು ನೆರವಿಗೆ ನಿಲ್ಲಬೇಕು ಎಂದು ಅವರು ಮನವಿ ಮಾಡಿದ್ದಾರೆ.

“ಚೀರನಹಳ್ಳಿಯ ಬೀರೇಶ್ವರ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶವಿರುವುದಿಲ್ಲ. ದೇವರ ಮೆರವಣಿಗೆ, ಪೂಜಾ ಕುಣಿತದಲ್ಲಿ ದಲಿತರು ಭಾಗವಹಿಸುವಂತಿಲ್ಲ. ಈ ಅಸ್ಪೃಶ್ಯತೆ ಆಚರಣೆಗೆ ದೇವಸ್ಥಾನದಷ್ಟೇ ಕರಾಳ ಇತಿಹಾಸ ಕೂಡ ಇದೆ. ದೇವಸ್ಥಾನವು ಕುರುಬ ಸಮುದಾಯದ ಅರ್ಚಕರ ಉಸ್ತುವಾರಿಕೆಯಲ್ಲಿ ನಡೆಯುತ್ತಿದೆ. ಈ ದೇವಸ್ಥಾನಕ್ಕೆ ಕೋಟಿ ಮೀರಿದ ಆದಾಯ ಹರಿದು ಬರುತ್ತಿದ್ದು, ಯಾರದೋ ತಿಜೋರಿ ತುಂಬುತ್ತಿದೆ. ಈ ವಿಚಾರವಾಗಿ ಪೂಜಾರಿಗಳಲ್ಲೇ ಜಗಳ ಆಗಿ ನ್ಯಾಯಾಲಯಕ್ಕೂ ಹೋಗಿ ಬಂದಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.”

ಲಕ್ಷ್ಮಣ್ ಚೀರನಹಳ್ಳಿ, ವಕೀಲ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News