ಮಂಡ್ಯ | ವಿದ್ಯಾರ್ಥಿ ನಿಲಯಕ್ಕೆ ಕಲ್ಲು ತೂರಿದ ಪ್ರಕರಣ: ಕುರುಬ ಸಂಘದಿಂದ ಪ್ರತಿಭಟನೆ; ದೂರು ದಾಖಲಿಸಲು ಮನವಿ

Update: 2024-01-30 11:54 GMT

ಮಂಡ್ಯ: ಕೆರಗೋಡಿನಲ್ಲಿ ಹನುಮಧ್ವಜ ತೆರವು ವಿರೋಧಿಸಿ ನಡೆದ ಪಾದಯಾತ್ರೆ ವೇಳೆ ಕುರುಬರ ವಿದ್ಯಾರ್ಥಿ ನಿಲಯದ ಮೇಲೆ ಕಲ್ಲು ತೂರಾಟ ನಡೆಸಿ ಭಕ್ತ ಕನಕದಾಸ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಫ್ಲೆಕ್ಸ್ ಹರಿದು ಅವಮಾನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಕುರುಬರ ಸಂಘ ಮಂಗಳವಾರ ಪ್ರತಿಭಟನೆ ನಡೆಸಿ ಎಸ್ಪಿಗೆ ದೂರು ನೀಡಿದೆ.

ನಗರದ ಕುರುಬರ ಸಂಘದ ಆವರಣದಿಂದ ಮೆರವಣಿಗೆ ಹೊರಟ ಸಂಘದ ಸದಸ್ಯರು ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡಿದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಎಸ್ಪಿ ಎನ್.ಯತೀಶ್ ಅವರಿಗೆ ಮನವಿ ಸಲ್ಲಿಸಿದರು.

ಬೆಂಗಳೂರು ಮೈಸೂರು ಹೆದ್ದಾರಿ ಬದಿಯಲ್ಲಿರುವ ಜಿಲ್ಲಾ ಕುರುಬರ ಸಂಘದ ವಿದ್ಯಾರ್ಥಿ ನಿಲಯದ ಕಿಟಕಿ ಗಾಜುಗಳನ್ನು ಕಲ್ಲು ಮತ್ತು ದೊಣ್ಣೆಯಿಂದ ಹೊಡೆದು ಕಿಡಿಗೇಡಿಗಳು ದೌರ್ಜನ್ಯ ಮಾಡಿದ್ದಾರೆ. ಅದೇ ರೀತಿ ದಾಸಶ್ರೇಷ್ಠ ಭಕ್ತ ಕನಕದಾಸರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರ ಫ್ಲೆಕ್ಸ್ ಗಳಿಗೂ ಅಪಮಾನ ಮಾಡಿ ಹಿಂದುಳಿದ ಸಮುದಾಯದ ವಿರುದ್ಧ ದ್ವೇಷ ಸಾಧಿಸಿದ್ದಾರೆ. ದೌರ್ಜನ್ಯ ದಬ್ಬಾಳಿಕೆ ಮಾಡಿದ ಕಿಡಿಗೇಡಿಗಳನ್ನು ಬಂಧಿಸಬೇಕು, ಕುಮ್ಮಕ್ಕು ನೀಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ  ಶಿವಣ್ಣ ಮಾತನಾಡಿ, ಜಿಲ್ಲೆಯಲ್ಲಿ ಜನರ ನೆಮ್ಮದಿ ಹಾಳು ಮಾಡಲು ಮುಂದಾಗಿರುವ ಬಿಜೆಪಿ, ಜೆಡಿಎಸ್ ಶಾಂತಿ ಕದಡಿ ಕೋಮು ದಳ್ಳುರಿಗೆ ಹುನ್ನಾರ ಮಾಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಗುರಿಯಾಗಿಸಿ ದಾಂಧಲೆ ಮಾಡಿದ್ದಾರೆ. ಕಿಡಿಗೇಡಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಶೋಷಿತ ಸಮುದಾಯಕ್ಕೆ ರಕ್ಷಣೆ ಕೊಡಬೇಕು ಎಂದು ಅವರು ಒತ್ತಾಯಿಸಿದರು.

ಕುರುಬರ ಸಂಘದ ಜಿಲ್ಲಾಧ್ಯಕ್ಷ ಎಂ.ಎಲ್.ಸುರೇಶ್, ಪ್ರಧಾನ ಕಾರ್ಯದರ್ಶಿ ಎಂ.ಜೆ ಶಶಿಧರ, ಉಪಾಧ್ಯಕ್ಷ ಶ್ರೀನಿವಾಸ್, ಖಜಾಂಚಿ ಎಸ್.ಎನ್.ರಾಜು, ಕೆಪಿಸಿಸಿ ಸದಸ್ಯ ದಡದಪುರ ಶಿವಣ್ಣ, ಕೆ.ಎಚ್.ನಾಗರಾಜು, ಗಾರೆ ಶಿವರಾಮು, ಜಿಪಂ ಮಾಜಿ ಸದಸ್ಯರಾದ ಎಂ.ಮರಿಹೆಗಡೆ, ನರಸಪ್ಪ ಹೆಗಡೆ, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಮಾಜಿ ಸದಸ್ಯ ಎಂ,ಮಹೇಶ್, ಸಾತನೂರು ಮಹೇಶ್, ಸತೀಶ, ಪುಟ್ಟಸ್ವಾಮಿ, ಅಮ್ಜದ್ ಪಾಷ, ಎಲ್.ಸಂದೇಶ್, ಕೊತ್ತತ್ತಿ ಸಿದ್ದಪ್ಪ, ಇತರ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News