ಮಂಡ್ಯ | ಮಹಿಳೆಯ ಮೇಲೆ ಪೊಲೀಸರಿಂದ ಹಲ್ಲೆ ಆರೋಪ: ಠಾಣೆ ಎದುರು ಪ್ರಗತಿಪರ ಮಹಿಳಾ ಸಂಘಟನೆಗಳ ಪ್ರತಿಭಟನೆ
ಮಂಡ್ಯ: ಮಹಿಳೆಗೆ ಥಳಿಸಿ ದೌರ್ಜನ್ಯ ನಡೆಸಿರುವ ಆರೋಪ ಸಂಬಂಧ ನಗರದ ಪೂರ್ವ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಅಯ್ಯನ್ ಗೌಡ ಸೇರಿದಂತೆ ಠಾಣೆಯ ಪೊಲೀಸರನ್ನು ಸೇವೆಯಿಂದ ಅಮಾನತು ಮಾಡುವಂತೆ ಒತ್ತಾಯಿಸಿ ಪ್ರಗತಿಪರ ಮಹಿಳಾ ಸಂಘಟನೆಗಳ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಪೂರ್ವ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಮಹಿಳೆ ಮೇಲೆ ದೌರ್ಜನ್ಯ ನಡೆಸಿರುವ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಮಂಡ್ಯದ ಅಶೋಕನಗರದ ಒಂದನೇ ಕ್ರಾಸ್ ನಲ್ಲಿ ತಮ್ಮ ಮನೆ ಮುಂದೆ ಹಸು ಕಟ್ಟಿ ಹಾಕಿದ್ದ ಮಹಿಳೆ ರೂಪಾದೇವಿ ವಿರುದ್ಧ ಯಾವುದೇ ದೂರು ಇಲ್ಲದಿದ್ದರೂ ಅಮಾಯಕ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಲವಂತವಾಗಿ ಜೀಪಿಗೆ ಹತ್ತಿಸಿಕೊಂಡು ಠಾಣೆಗೆ ಕರೆತಂದು, ಕೋಣೆಯೊಂದರಲ್ಲಿ ಕೂಡಿ ಹಾಕಿ ಸಬ್ ಇನ್‌ಸ್ಪೆಕ್ಟರ್ ಅಯ್ಯನ್ ಗೌಡ ಮತ್ತು ಸಿಬ್ಬಂದಿ ಮನಸೋ ಇಚ್ಛೆ ಥಳಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಮಹಿಳೆ ಮೇಲೆ ಪೊಲೀಸರು ಗೂಂಡಾ ವರ್ತನೆ ತೋರಿರುವುದು ಸಂವಿಧಾನ ವಿರೋಧಿಯಾಗಿದ್ದು, ಮಾನವ ಹಕ್ಕು ಹಾಗೂ ಮಹಿಳೆಯರ ಹಕ್ಕುಗಳನ್ನು ದಮನ ಮಾಡುವ ವರ್ತನೆ ಕಾನೂನು ಬಾಹಿರವಾಗಿದೆ. ರಕ್ಷಣೆ ನೀಡಬೇಕಾದ ಪೊಲೀಸರೇ ಭಕ್ಷಕರಾಗಿದ್ದಾರೆ. ಗೂಂಡಾ ವರ್ತನೆ ಅಕ್ಷಮ್ಯ ಅಪರಾಧವಾಗಿದ್ದು, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತಲೆತಗ್ಗಿಸುವ ವಿಚಾರವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಜನಶಕ್ತಿಯ ಪೂರ್ಣಿಮಾ, ಸಿದ್ದರಾಜು, ಮಂಗಲ ಲಂಕೇಶ್ ಸಿಐಟಿಯುನ ಸಿ.ಕುಮಾರಿ, ಸಿಪಿಐಎಂ ಪಕ್ಷದ ಟಿ.ಎಲ್. ಕೃಷ್ಣೇಗೌಡ, ರೈತ ಸಂಘದ ಸುನಂದ ಜಯರಾಮ್, ಲತಾ ಶಂಕರ್, ರಾಷ್ಟ್ರೀಯ ಭಾರತೀಯ ಮಾನವ ಹಕ್ಕುಗಳ ಸಂಘದ ರಾಧಾಮಣಿ ಬಿ.ಪಿ., ಎ.ಬಿ. ಶಶಿಕಲಾ, ವಿಮೋಚನ ಮಹಿಳಾ ಸಂಘಟನೆಯ ಜನಾರ್ದನ, ಸಿದ್ದರಾಜು.ಎಂ. ಪ್ರತಿಭಟನೆಯ ನೇತೃತ್ವವಹಿಸಿದ್ದರು.
ಪಿಎಸ್ಐ ಅಯ್ಯನಗೌಡ ಅಮಾನತು
ಘಟನೆಗೆ ಸಂಬಂಧಿಸಿದಂತೆ ನಗರದ ಪೂರ್ವ ಪೊಲೀಸ್ ಠಾಣೆಯ ಪಿಎಸ್ಐ ಅಯ್ಯನಗೌಡ ಅವರನ್ನು ಕರ್ತವ್ಯದಿಂದ ಅಮಾನತು ಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಆದೇಶಿಸಿದ್ದಾರೆ.
ಸಂತ್ರಸ್ತೆ ರೂಪದೇವಿಯವರ ತಾಯಿ ಗೌರಮ್ಮ ನೀಡಿದ ದೂರನ ಹಿನ್ನೆಲೆಯಲ್ಲಿ ಅಯ್ಯನಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.