ಮಂಡ್ಯ | ಬೇಬಿ ಬೆಟ್ಟದಲ್ಲಿ ಜು.15ರವರೆಗೆ ʼಟ್ರಯಲ್ ಬ್ಲಾಸ್ಟ್ʼ ನಡೆಸುವುದಿಲ್ಲ : ಸಚಿವ ಚಲುವರಾಯಸ್ವಾಮಿ

Update: 2024-07-06 08:59 GMT

ಮಂಡ್ಯ: ಕೆ.ಆರ್.ಎಸ್ ಅಣೆಕಟ್ಟು ಬಳಿಯ ಬೇಬಿಬೆಟ್ಟ ಗಣಿ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಸಂಬಂಧಿಸಿದಂತೆ ಜು.15ರಂದು ಕೋರ್ಟ್‌ಗೆ ಸಮಗ್ರ ಮಾಹಿತಿ ಕೊಡಲಿದ್ದು, ಗೊಂದಲ ಬಗೆಹರಿಯದಿದ್ದರೆ ಸಮಯಾವಕಾಶ ಕೇಳಲಾಗುವುದು. ಅಲ್ಲದೆ, ಜುಲೈ.15ರವರೆಗೆ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಶನಿವಾರ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಕೆ.ಆರ್.ಎಸ್ ಅಣೆಕಟ್ಟಿನ ಹತ್ತಿರ ಟ್ರಯಲ್ ಬ್ಲಾಸ್ಟ್ ನಡೆಸುವ ಸಂಬಂಧ ರೈತ ನಾಯಕರೊಂದಿಗೆ ಚರ್ಚೆ ನಡೆಸಿದ ಅವರು, ಅಣೆಕಟ್ಟೆಗೆ ಸಣ್ಣ ತೊಂದರೆ ಉಂಟಾಗಲೂ ಬಿಡುವುದಿಲ್ಲ ಎಂದರು.

ಅಣೆಕಟ್ಟು ಸಂರಕ್ಷಣೆ ಸರಕಾರದ ಮುಖ್ಯ ಜವಾಬ್ದಾರಿಯಾಗಿದೆ. ಟ್ರಯಲ್ ಬ್ಲಾಸ್ಟ್ ಕುರಿತಂತೆ ಜಿಲ್ಲೆಯ ಪ್ರಸಿದ್ಧ ರೈತರ ಅಭಿಪ್ರಾಯ ಹಾಗೂ ಕೆ. ಆರ್.ಎಸ್ ಅಣೆಕಟ್ಟಿನ ಅವಶ್ಯಕತೆಯ ದೃಷ್ಟಿಕೋನವನ್ನು ಇಟ್ಟುಕೊಂಡು, ಅಣೆಕಟ್ಟೆಗೆ ಸಣ್ಣ ತೊಂದರೆ ಆಗದಂತೆ ಎಚ್ಚರವಹಿಸಿ, ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿರುವ ಕೆ.ಆರ್.ಎಸ್ ಅಣೆಕಟ್ಟಿನ ಹತ್ತಿರ ಟ್ರಯಲ್ ಬ್ಲಾಸ್ಟ್ ನಡೆಸಬೇಕಿದ್ದು, ಟ್ರಯಲ್ ಬ್ಲಾಸ್ಟ್ ಮಾಡುವುದೋ ಅಥವಾ ಬೇಡವೋ ಎಂಬ ಚರ್ಚೆಗಳು ಸಾಕಷ್ಟು ನಡೆಯುತ್ತಿದೆ. ಕಳೆದ ವಾರದಿಂದ ರೈತರು ಪ್ರತಿಭಟನೆ ಮಾಡುವ ಮೂಲಕ ಟ್ರಯಲ್ ಬ್ಲಾಸ್ಟ್ ನಿಂದ ಅಣೆಕಟ್ಟಿಗೆ ತೊಂದರೆಯಾಗುವುದು ಎಂದು ಸರಕಾರದ ಗಮನಕ್ಕೆ ತಂದಿದ್ದಾರೆ. ಸರಕಾರವು ಟ್ರಯಲ್ ಬ್ಲಾಸ್ಟ್ ಗೆ ಯಾವುದೇ ದಿನಾಂಕವನ್ನು ನಿಗದಿ ಮಾಡಿಲ್ಲ ಎಂದರು.

ಟ್ರಯಲ್ ಬ್ಲಾಸ್ಟ್‌ಗೆ ಸಂಬಂಧಿಸಿದಂತೆ ಜಿಲ್ಲಾಡಳಿತ, ಕಾನೂನು ಇಲಾಖೆ ಜೊತೆ ನಿರಂತರವಾಗಿ ಚರ್ಚೆ ನಡೆಸುತ್ತಿದ್ದೇನೆ. ನ್ಯಾಯಾಲಯದ ವಿಚಾರಣೆಯು ಜುಲೈ.15ರಂದು ನಡೆಯಲಿದೆ. ಅಲ್ಲಿಯವರೆಗೂ ರೈತರ ಅಭಿಪ್ರಾಯಗಳನ್ನು ಪಡೆದು  ಅಧಿಕೃತವಾಗಿ ಮುಖ್ಯಮಂತ್ರಿಗಳು ಹಾಗೂ ಅಡ್ವೋಕೇಟ್ ಜನರಲ್ ಜೊತೆ ಮಾತನಾಡಿ, ಈ ಬಗ್ಗೆ ಸ್ಪಷ್ಟ ನಿಲುವನ್ನು ಕೋರ್ಟ್ ಮುಂದೆ ತಿಳಿಸಲಾಗುವುದು ಎಂದು ಅವರು ತಿಳಿಸಿದರು.

ರೈತರ ಅಭಿಪ್ರಾಯ ಕುರಿತಂತೆ ಚರ್ಚಿಸಲು ಮುಖ್ಯಮಂತ್ರಿ ಅವರ ಜೊತೆ ಸಭೆ ಆಯೋಜಿಸಲಾಗುವುದು. ಸಭೆ ನಡೆಯುವ ದಿನದಂದು ಆಯ್ದ ಐದು ರೈತ ಮುಖಂಡರು ಬೆಂಗಳೂರಿಗೆ ಆಗಮಿಸಿ, ಸಭೆಯಲ್ಲಿ ಭಾಗವಹಿಸುವಂತೆ ಚೆಲುವರಾಯಸ್ವಾಮಿ ಮನವಿ ಮಾಡಿದರು.

 ಸಭೆಯಲ್ಲಿ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಕಾನೀನಿನಿ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ತಾಂತ್ರಿಕ ಅಧಿಕಾರಿ ಶಿವಪ್ರಸಾದ್ , ಎಎಸ್ಪಿ ತಿಮ್ಮಯ್ಯ ಹಾಗೂ ರೈತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News