ಮೈಸೂರು ಚಲೋ ಪಾದಯಾತ್ರೆಯಲ್ಲಿ ಪ್ರೀತಂಗೌಡ | ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ನಡುವೆ ಜಟಾಪಟಿ

Update: 2024-08-07 14:53 GMT

ಮಂಡ್ಯ : ಬಿಜೆಪಿ-ಜೆಡಿಎಸ್ ಜಂಟಿಯಾಗಿ ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆಯಲ್ಲಿ ಹಾಸನದ ಬಿಜೆಪಿ ಮುಖಂಡ ಪ್ರೀತಂಗೌಡ ಭಾಗವಹಿಸಿರುವುದಕ್ಕೆ ಜೆಡಿಎಸ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ಬುಧವಾರ ನಗರದಲ್ಲಿ ನಡೆಯಿತು.

ನಗರದಲ್ಲಿ ನಡೆದ ಐದನೇ ದಿನದ ಪಾದಯಾತ್ರೆಯಲ್ಲಿ ಪ್ರೀತಂಗೌಡ ಕಾಣಿಸಿಕೊಳ್ಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಅವರನ್ನು ಹೆಗಲ ಮೇಲೆ ಹೊತ್ತು ‘ಹಾಸನದ ಹುಲಿ, ಮಂಡ್ಯದ ಹುಲಿ, ತುಮಕೂರಿನ ಹುಲಿ’ ಎಂದು ಜೈಕಾರ ಕೂಗಿ ಸಂಭ್ರಮಿಸಿದರು.

ಪ್ರೀತಂಗೌಡ ಪರ ಘೋಷಣೆಯಿಂದ ಕೆಲವು ಜೆಡಿಎಸ್ ಕಾರ್ಯಕರ್ತರು ಕೆರಳಿದರು. ಘೋಷಣೆಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ತಾರಕ್ಕೇರಿ ಕೈ ಕೈ ಮಿಲಾಸಯುವ ಹಂತ ತಲುಪಿತು. ಪರಸ್ಪರ ಎಳೆದಾಡಿಕೊಂಡರು ಎನ್ನಲಾಗಿದೆ.

ಇಷ್ಟೆಲ್ಲಾ ನಡೆಯುತ್ತಿದ್ದರೂ ಏನೂ ಆಗಿಲ್ಲವೆಂಬಂತೆ ಪ್ರೀತಂಗೌಡ ತನ್ನಷ್ಟಕ್ಕೆ ತಾನು ಹೆಜ್ಜೆ ಹಾಕುತ್ತಿದ್ದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಮೈತ್ರಿ ಪಕ್ಷಗಳ ಮುಖಂಡರು ಎರಡೂ ಕಡೆಯವರನ್ನು ಸಮಾಧಾನಿಸಲು ಹರಸಾಹಸಪಡಬೇಕಾಯಿತು.

ಈ ಪ್ರಕರಣ ನಡೆದದ್ದು, ನಗರದ ಹೊರವಲಯದಲ್ಲಿ. ಆಗ ತಾನೇ ಪಾದಯಾತ್ರೆ ಆರಂಭವಾಗಿತ್ತು. ತೆರೆದ ವಾಹನದಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಜೆಡಿಎಸ್ ನಾಯಕರು ಮಾತ್ರ ಇದ್ದರು. 

ಮಧ್ಯಾಹ್ನದ ವೇಳೆಗೆ ಪಾದಯಾತ್ರೆ ನಗರದ ಸಂಜಯ ವೃತ್ತಕ್ಕೆ ಪ್ರವೇಶ ಪಡೆಯಿತು. ಅಲ್ಲಿಗೆ ಆಗಮಿಸಿದ ಕುಮಾರಸ್ವಾಮಿ, ಆರ್.ಅಶೋಕ್, ಬಿ.ವೈ.ವಿಜಯೇಂದ್ರ, ಡಾ.ಅಶ್ವಥ ನಾರಾಯಣ, ಇತರ ನಾಯಕರು ಭಾಷಣ ಮಾಡಿದರು. ಆದರೆ, ಅಲ್ಲಿ ಪ್ರೀತಂಗೌಡರ ಸುಳಿವು ಇರಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News