ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸೋಲಿಸಲು ಕಂಕಣ ಬದ್ಧರಾಗಿದ್ದೇವೆ : ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್

Update: 2024-03-30 14:22 GMT

ಮಂಡ್ಯ: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನಕ್ಕೆ ಕಂಟಕವಾಗಿರುವ ಬಿಜೆಪಿ ಮೈತ್ರಿಕೂಟವನ್ನು ಸೋಲಿಸುವುದು ನಮ್ಮ ಗುರಿಯಾಗಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸೋಲಿಸಲು ಕಂಕಣ ಬದ್ಧರಾಗಿದ್ದೇವೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಘೋಷಿಸಿದ್ದಾರೆ.

ನಗರದ ಕನಕ ಭವನದಲ್ಲಿ ಶನಿವಾರ ನಡೆದ ದಲಿತ ಸಂಘರ್ಷ ಸಮಿತಿ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಹಾಗೂ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ಅವರು, "ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು ಲೋಕಸಭಾ ಚುನಾವಣೆ ಕೊನೆಯ ಅವಕಾಶವಾಗಿದೆ. ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೆಲ್ಲುವುದು ಒಂದೇ, ಮಂಡ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಗೆಲ್ಲುವುದು ಒಂದೇ. ಏಕೆಂದರೆ ಪ್ರಧಾನಿ ಮೋದಿ ಕೋಮುವಾದಿಯಾದರೆ ಕುಮಾರಸ್ವಾಮಿ ಕೋಮುವಾದಿ ಮನಸ್ಥಿತಿ ಜೊತೆಗೆ ಜಾತಿವಾದಿಯೂ ಆಗಿದ್ದಾರೆ"  ಅವರು ಟೀಕಿಸಿದರು.

ʼ2013ರಲ್ಲಿ ಸಿದ್ದರಾಮಯ್ಯ ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿದಾಗ, ಕುಮಾರಸ್ವಾಮಿ ಅಕ್ಕಿ ಜೊತೆಗೆ ಕ್ವಾಟರ್ ಬಾಟಲ್ ನೀಡಿಬಿಡಿ. ನೀವು ಜನರನ್ನು ಸೋಮಾರಿ ಮಾಡುತ್ತಿದ್ದೀರಿ ಎಂದಿದ್ದರು. ಶೋಷಿತರು ದುಡಿಯಲು ಮಾತ್ರ ಹುಟ್ಟಿದ್ದಾರೆ ಎಂಬ ಮನಸ್ಥಿತಿಯನ್ನು ಅನಾವರಣ ಮಾಡಿದ್ದರುʼ ಎಂದು ಗುರುಪ್ರಸಾದ್ ಸ್ಮರಿಸಿದರು.

ʼದೇಶದ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಸಂಸದರು ಹೇಳುತ್ತಾರೆ. ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬರು ಚಪ್ಪಲಿ ಬಿಡುವ ಸ್ಥಳದಲ್ಲಿದ್ದವರು ಇದೀಗ ನಮ್ಮ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದಾರೆ ಎಂದು ಹೇಳುತ್ತಾರೆ. ಮತ್ತೊಂದೆಡೆ ಪ್ರಧಾನಮಂತ್ರಿ ನರೇಂದ್ರ ಮೋದಿ ದುರಾಡಳಿತ ಜನರ ಬದುಕನ್ನು ಸಂಕಷ್ಟಕ್ಕೆ ತಂದೊಡ್ಡಿದೆʼ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಒಂದು ಪತ್ರಿಕಾಗೋಷ್ಠಿ ನಡೆಸದ ಮೋದಿ ಸಂಸತ್ ಅಧಿವೇಶನದಲ್ಲಿಯು ಕಡಿಮೆ ಮಾತನಾಡಿ ಯಾವುದೇ ಸಮಸ್ಯೆಗೆ ಸ್ವಷ್ಟತೆ ನೀಡಿಲ್ಲ. ಆ ಮೂಲಕ ಸಂಸದೀಯ ನಿಯಮಾವಳಿಗೆ ವಿರುದ್ಧವಾಗಿ ನಡೆದಿದ್ದಾರೆ. ಹೊಸ ಉದ್ಯೋಗ ಸೃಷ್ಟಿ ಕನಸಿನ ಮಾತಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವ ಮೂಲಕ ತಳ ಸಮುದಾಯದವರ ಅಕ್ಷರ ಕಲಿಕೆ ಕಸಿಯಲು ಮುಂದಾಗಿದ್ದಾರೆ ಎಂದು ಅವರು ಟೀಕಿಸಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ಕೂಟವನ್ನು ಸೋಲಿಸಲು ಮುಖಂಡರು ಮುಂದಾಗಿದ್ದು, ಜಿಲ್ಲೆಯ ಎಲ್ಲೆಡೆ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಲು ಕರಪತ್ರ ಹಂಚಿಕೆ ಮಾಡಲಾಗುವುದು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ಎಚ್ಚರಿಸಲಾಗುವುದೆಂದು ಅವರು ತಿಳಿಸಿದರು.

"2022 ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ದಲಿತ ಸಂಘಟನೆಗಳ ಐಕ್ಯತಾ ಸಭೆಯಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಅಳಿವು ಉಳಿವಿನ‌ ಪ್ರಶ್ನೆಯಾಗಿರುವುದರಿಂದ ಕೋಮುವಾದಿ ಶಕ್ತಿಯನ್ನು ಮಣಿಸಲು ನಿರ್ಣಯಿಸಿ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಸಹಕಾರ ನೀಡಲು ತೀರ್ಮಾನಿಸಲಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರೇ ಆಗಲಿ ಅವರನ್ನು ಗೆಲ್ಲಿಸುವ ಮೂಲಕ ಕೋಮುವಾದಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿಯನ್ನು ಸೋಲಿಸಲು ಸವಾಲು ಸ್ವೀಕರಿಸಿದ್ದೇವೆ. ಇದಕ್ಕಾಗಿ ದಸಂಸ ಮುಖಂಡರು, ಕಾರ್ಯಕರ್ತರು ಹಳ್ಳಿ ಹಳ್ಳಿಯಲ್ಲಿ ಪ್ರಚಾರ ಮಾಡಲಿದ್ದಾರೆ." ಎಂದರು.

ಸಭೆಯಲ್ಲಿ ಚಿಂತಕ ಪ್ರೊ. ಹುಲ್ಕೆರೆ ಮಹಾದೇವ, ಪ್ರಗತಿಪರ ಸಂಘಟನೆಯ ಮುಖಂಡರಾದ ಎಲ್.ಸಂದೇಶ್, ಹಾರೋಹಳ್ಳಿ ಪ್ರಕಾಶ್, ಚಂದ್ರಶೇಖರ್, ಪ್ರಕಾಶ್ ಬ್ಯಾಡರಹಳ್ಳಿ, ಹಾಲಪ್ಪ, ದೇವರಾಜ್, ಗಂಗಾಧರ್, ಕೃಷ್ಣಪ್ರಸಾದ್, ರಾಜಶೇಖರ್, ರಾಮಂದೂರು ಸಿದ್ದರಾಜು, ಮುದ್ದಯ್ಯ, ರವಿಕುಮಾರ್, ಗೋವಿಂದರಾಜು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News